ಕಾಂಚನಜುಂಗಾ ಏರಿದ ಅತ್ಯಂತ ಕಿರಿಯ ಮಹಿಳೆ ಬಗ್ಗೆ ನಿಮಗೇನು ಗೊತ್ತು?

Update: 2018-08-06 05:09 GMT

ಡೆಹ್ರಾಡೂನ್, ಆ.6: ಉತ್ತರಾಖಂಡದ ಪಿತೋರ್‌ಗಢ ಗ್ರಾಮದ ಶೀತಲ್‌ರಾಜ್ (22), ವಿಶ್ವದ ಮೂರನೇ ಅತಿ ಎತ್ತರದ ಶಿಖರ ಎನಿಸಿದ ಕಾಂಚನಜುಂಗಾ ಏರಿದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಳೆ ವಯಸ್ಸಿನಿಂದಲೂ ಪರ್ವತಾರೋಹಣದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಶೀತಲ್, ಮೇ 21ರಂದು 8,586 ಮೀಟರ್ ಎತ್ತರದ ಶೃಂಗವನ್ನು ಏರಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

"ನಾವು ತುತ್ತತುದಿಯನ್ನು ಏರಿದ್ದೇವೆ ಎಂದು ಶೆರ್ಪಾ ಹೇಳಿದಾಗ, ನನ್ನಲ್ಲಿ ಆನೆ ಬಲ ಬಂತು. ದೇಹದಲ್ಲಿ ವಿದ್ಯುತ್‌ ಸಂಚಾರವಾಯಿತು. ಆನಂದ ಕಟ್ಟೆಯೊಡೆದು ಶೆರ್ಪಾನನ್ನು ಆಲಂಗಿಸಿಕೊಂಡೆ. ಇದು ನಂಬಲಸಾಧ್ಯ" ಎಂದು ಅಪೂರ್ವ ಅನುಭವವನ್ನು ಹಂಚಿಕೊಂಡರು.

"ಕಟ್ಟಿಗೆ ತರಲು ಕಾಡು, ಮೇಡು, ಪರ್ವತ ಅಲೆಯುತ್ತಿದ್ದ ತಾಯಿ ಜತೆಗೆ ನಾನೂ ಹೋಗುತ್ತಿದ್ದೆ. ಅಲ್ಲಿಂದ ಕಾಣುವ ರಮಣೀಯ ದೃಶ್ಯ ಮತ್ತು ಮೌನ ನನ್ನಲ್ಲಿ ಪ್ರಶಾಂತ ಸ್ಥಿತಿಯನ್ನು ತರುತ್ತಿತ್ತು" ಎಂದು ಟ್ಯಾಕ್ಸಿ ಚಾಲಕನ ಮಗಳಾದ ಶೀತಲ್ ಹೇಳುತ್ತಾರೆ.

ಶೀತಲ್ 2014ರಲ್ಲಿ ಮೊದಲ ಪರ್ವತಾರೋಹರಣದ ಅವಕಾಶ ಪಡೆದರು. "ನನ್ನ ಕಾಲೇಜಿನ ಎನ್‌ಸಿಸಿ ತಂಡದ ಸದಸ್ಯೆಯಾಗಿ ನಾನು ಆಯ್ಕೆಯಾಗಿದ್ದೆ. ತಂದೆ ತಾಯಿಯಲ್ಲಿ ಪ್ರವಾಸ ಹೋಗುವುದಾಗಿ ಹೇಳಿದ್ದೆ. ಅದಕ್ಕೂ ಒಪ್ಪಲಿಲ್ಲ. ಹೇಗೋ ಅವರ ಮನವೊಲಿಸಿದೆ. ನಾನು ವಾಪಸ್ಸಾದ ಬಳಿಕ ನಾನು ಪರ್ವತಾರೋಹಣಕ್ಕೆ ಹೋದ ವಿಷಯ ಅವರಿಗೆ ತಿಳಿಯಿತು"

ಕಷ್ಟಪಟ್ಟು ತಂದೆ ತಾಯಿಯನ್ನು ಒಪ್ಪಿಸಿ ನಿರಂತರ ಪರ್ವತಾರೋಹಣಕ್ಕೆ ಶೀತಲ್ ಮುಂದಾದರು. ಡಾರ್ಜಿಲಿಂಗ್‌ನ ಹಿಮಾಲಯನ್ ಮೌಂಟನಿಯರಿಂಗ್ ಇನ್‌ಸ್ಟಿಟ್ಯೂಟ್‌ನಿಂದ 2015ರಲ್ಲಿ ಪರ್ವತಾರೋಹಣ ತರಬೇತಿ ಪಡೆದರು.

"150 ಯುವತಿಯರ ತಂಡದಲ್ಲಿ ನಾವು 53 ಮಂದಿ ರಿನೋಕ್ ಶೃಂಗ ತಲುಪಿದ್ದೆವು. ನಂತರ ಮತ್ತೊಂದು ಯಾನವನ್ನೂ ಯಶಸ್ವಿಯಾಗಿ ಪೂರೈಸಿದೆವು. ಎವೆರೆಸ್ಟ್ ಪೂರ್ವ ಶಿಬಿರವಾದ ತ್ರಿಶೂಲ್ ಪರ್ವತಾರೋಹರಣವನ್ನು ಕೇವಲ 15 ಮಂದಿ ಪೂರ್ಣಗೊಳಿಸಿದೆವು" ಎಂದು ಅವರು ಯಶೋಗಾಥೆ ಬಿಚ್ಚಿಟ್ಟರು.

ಆದರೆ ಎವೆರೆಸ್ಟ್ ಪರ್ವತಾಹೋರಣಕ್ಕೆ ಅವಕಾಶ ಸಿಕ್ಕದಿದ್ದಾಗ ಖಿನ್ನತೆಯಿಂದ ಕಾಲೇಜು ತೊರೆದರು. ಬಳಿಕ ಇಂಡಿಯನ್ ಮೌಂಟೆನಿಯರಿಂಗ್ ಫೌಂಡೇಶನ್ ಸೇರಿ ಎಪ್ರಿಲ್‌ನಲ್ಲಿ ಕಾಂಚನಜುಂಗಾ ಯಾನದ ಅವಕಾಶ ಪಡೆದರು. ನೇಪಾಳದ ಹಾಪುರ್ ಕ್ಹೋಲಾದಿಂದ ಆರಂಭಿಸಿ 15 ದಿನಗಳಲ್ಲಿ ಪರ್ವತಾರೋಹಣ ಪೂರ್ತಿಗೊಳಿಸಿದ್ದಾಗಿ ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News