ಮುಖ್ಯಮಂತ್ರಿ ವಸತಿ ಯೋಜನೆಯಡಿ 60 ಸಾವಿರ ಮನೆ ನಿರ್ಮಾಣಕ್ಕೆ ಆ.12ರಂದು ಚಾಲನೆ: ಸಚಿವ ಯು.ಟಿ.ಖಾದರ್

Update: 2018-08-06 12:57 GMT

ಬೆಂಗಳೂರು, ಆ. 6: ‘ಮುಖ್ಯಮಂತ್ರಿ ವಸತಿ ಯೋಜನೆ’ಯಡಿ ಆರ್ಥಿಕವಾಗಿ ಹಿಂದುಳಿದ ಬಡವರಿಗೆ 60 ಸಾವಿರ ಮನೆ ನಿರ್ಮಾಣಕ್ಕೆ ಆ.12ರಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ವಸತಿ ಯೋಜನೆಯಡಿ 60 ಸಾವಿರ ಮನೆ ನಿರ್ಮಾಣ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

60 ಸಾವಿರ ಮನೆಗಳ ಪೈಕಿ 22 ಸಾವಿರ ಮನೆಗಳನ್ನು ಉತ್ತರ ಕರ್ನಾಟಕದಲ್ಲಿ ನಿರ್ಮಿಸಲಾಗುತ್ತಿದೆ. ಹುಬ್ಬಳ್ಳಿ ನಗರದಲ್ಲಿ ಆ.12ರ ಸಂಜೆ 4 ಗಂಟೆಗೆ ಶಂಕುಸ್ಥಾಪನೆ ಕಾರ್ಯಕ್ರಮ ಜರುಗಲಿದ್ದು, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.

60 ಸಾವಿರ ಮನೆಗಳ ಕಾಮಗಾರಿ 8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಉದ್ದೇಶಿತ ವಸತಿ ಯೋಜನೆಗೆ ಎಸ್ಸಿ-ಎಸ್ಟಿ ವರ್ಗದವರಿಗೆ ಕೇಂದ್ರ-ಶೇ.30, ರಾಜ್ಯ ಸರಕಾರ ಶೇ.40, ಬ್ಯಾಂಕ್ ಶೇ.20 ಹಾಗೂ ಫಲಾನುಭವಿ ಶೇ.10ರಷ್ಟು ಭರಿಸಬೇಕಾಗುತ್ತದೆ ಎಂದು ತಿಳಿಸಿದರು.

ಒಂದು ಮನೆ ನಿರ್ಮಾಣಕ್ಕೆ 4.5 ಲಕ್ಷ ರೂ.ವೆಚ್ಚವಾಗಲಿದೆ. ಸಾಮಾನ್ಯ ವರ್ಗದವರಿಗೆ ಕೇಂದ್ರ 1.50 ಲಕ್ಷ ರೂ., ರಾಜ್ಯ-1.25ಲಕ್ಷ ರೂ. ಉಳಿದ ಮೊತ್ತವನ್ನು ಫಲಾನುಭವಿ ಬ್ಯಾಂಕ್ ಮೂಲಕ ಭರಿಸಬೇಕಾಗುತ್ತದೆ ಎಂದ ಅವರು, ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ 2ಲಕ್ಷ ರೂ. ಧನ ಸಹಾಯ ನೀಡಲಿದೆ ಎಂದರು

45 ಸಾವಿರ ಮನೆ: ಬಿಬಿಎಂಪಿ ವ್ಯಾಪ್ತಿಯಲ್ಲಿನ ಬಡವರಿಗೆ ಮುಖ್ಯಮಂತ್ರಿ ವಸತಿ ಯೋಜನೆಯಡಿ 1 ಲಕ್ಷ ಮನೆ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಸಿರುವ 45 ಸಾವಿರ ಮಂದಿ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಈ ಯೋಜನೆಯಡಿ ಸಿಂಗಲ್ ಮತ್ತು ಡಬಲ್ ಬೆಡ್ ರೂಂ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಡಬಲ್ ಬೆಡ್ ರೂಂ ಮನೆಗಳಿಗೆ ಸರಕಾರದಿಂದ ಯಾವುದೇ ಸಬ್ಸಿಡಿ ಇರುವುದಿಲ್ಲ. ಸಿಂಗಲ್ ಬೆಡ್ ರೂಂ ಮನೆಗಳಿಗೆ ಸಬ್ಸಿಡಿ ನೀಡಲಾಗುವುದು ಎಂದ ಅವರು, 1 ಲಕ್ಷ ರೂ.ಗಳನ್ನು ಫಲಾನುಭವಿ ಪಾವತಿಸಬೇಕು. ಉಳಿದ ಮೊತ್ತವನ್ನು ಬ್ಯಾಂಕ್‌ನಿಂದ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಒಂದು ಅವಧಿಗೆ ಮಂಜೂರಾತಿ: ರಾಜೀವ್‌ ಗಾಂಧಿ ವಸತಿ ಯೋಜನೆಯಡಿ ಆಯ್ಕೆಯಾಗಿ ತಾಂತ್ರಿಕ ಕಾರಣಕ್ಕೆ ಅನುದಾನ ಬಿಡುಗಡೆಗೊಳ್ಳದಿರುವವರಿಗೆ ಒಂದು ತಿಂಗಳು ಕಾಲಾವಕಾಶ ನೀಡಿ ಒಂದು ಅವಧಿಗೆ ಮಂಜೂರು ಮಾಡಲಾಗುವುದು ಎಂದು ಹೇಳಿದರು.

‘ವಸತಿ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯಿಂದ ಜನಸಾಮಾನ್ಯರಿಗೆ ಸ್ಪಂದಿಸಲು ‘ಸ್ಪಂದನ’ ಎಂದು ಟೋಲ್ ಫ್ರೀ ಕರೆ ಆರಂಭಿಸಲು ನಾಲ್ಕು ಡಿಜಿಟ್‌ನ ಟೋಲ್ ಫ್ರೀ ನಂಬರ್ ಕೋರಿ ಟೆಲಿಕಮ್ಯೂನಿಕೇಷನ್ ಕೇಂದ್ರಕ್ಕೆ ಪತ್ರ ಬರೆದು ಒಂದೂವರೆ ತಿಂಗಳು ಕಳೆದರೂ ಅಲ್ಲಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ’
-ಯು.ಟಿ.ಖಾದರ್, ವಸತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News