ನಿಮ್ಮನ್ನು ಜೈಲಿಗೆ ಕಳುಹಿಸಬೇಕು: ಎನ್‍ಆರ್ ಸಿ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ತರಾಟೆ

Update: 2018-08-07 10:47 GMT

ಹೊಸದಿಲ್ಲಿ, ಆ.7: ಮಾಧ್ಯಮದ ಜತೆ ಮಾತನಾಡಿದ ಅಸ್ಸಾಂ ರಾಜ್ಯದ ನ್ಯಾಷನಲ್ ಸಿಟಿಜನ್ಸ್ ರಿಜಿಸ್ಟರ್ ತಯಾರಿಯ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಯಾವ ಅಧಿಕಾರದ ಆಧಾರದಲ್ಲಿ ಸಂಘಟಕ ಪ್ರತೀಕ್ ಹಜೇಲಾ ಅವರು ಹೇಳಿಕೆಗಳನ್ನು ನೀಡಿದ್ದರೆಂದು ಪ್ರಶ್ನಿಸಿದ ನ್ಯಾಯಾಲಯ  ಹಜೇಲಾ ಮತ್ತು ರಿಜಿಸ್ಟ್ರಾರ್ ಅವರನ್ನು ಜೈಲಿಗೆ ಕಳುಹಿಸಬೇಕು. ಆದರೆ ಅವರ ಕೈಯಲ್ಲಿ ದೊಡ್ಡ ಕೆಲಸವೊಂದಿರುವುದರಿಂದ ಹಾಗೆ ಮಾಡಲಾಗಿಲ್ಲ ಎಂದರು.

ಪಟ್ಟಿಯಲ್ಲಿ 40 ಲಕ್ಷ ಮಂದಿಯ ಹೆಸರುಗಳು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಹೆಸರು ಕಾಣಿಸಿಕೊಳ್ಳದೇ ಇರುವ ಜನರು ಹೊಸ ದಾಖಲೆಗಳನ್ನು ಸಲ್ಲಿಸಬಹುದೆಂದು ಹಜೇಲಾ ಅವರು ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಈ ಪಟ್ಟಿಯಲ್ಲಿ ಹೆಸರಿಲ್ಲದೇ ಇರುವ ಎಲ್ಲಾ 40 ಲಕ್ಷ ಜನರನ್ನು ನುಸುಳುಕೋರರು ಎಂದು ಪರಿಗಣಿಸಲಾಗದು ಎಂದೂ ಅವರು ಹೇಳಿದ್ದರು.

“ನೀವು ನ್ಯಾಯಾಲಯದ ಅಧಿಕಾರಿಗಳೆಂದು ಮರೆಯಬೇಡಿ'' ಎಂದು ಈ ಎನ್‍ಆರ್‍ಸಿ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸುಪ್ರೀಂ ಕೋರ್ಟ್ ಹೇಳಿದೆ. “ನಿಮ್ಮ ಕೆಲಸ ಕೇವಲ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ತಯಾರಿಸುವುದೇ ಹೊರತು ಮಾಧ್ಯಮಕ್ಕೆ ಹೇಳಿಕೆ ನೀಡುವುದಲ್ಲ” ಎಂದು ನ್ಯಾಯಾಧೀಶರು ಹೇಳುವ ಸಂದರ್ಭ ಅವರ ಕೈಯ್ಯಲ್ಲಿ ಹಜೇಲಾ ಅವರು ಸಂದರ್ಶನ ನೀಡಿದ ಪತ್ರಿಕೆಯ ಪ್ರತಿಯಿತ್ತು.

ಭವಿಷ್ಯದಲ್ಲಿ ಮಾಧ್ಯಮದ ಜತೆ ಮಾತನಾಡುವುದರ ವಿರುದ್ಧ ನ್ಯಾಯಾಲಯವು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತಲ್ಲದೆ, ಅವರು ಅನುಮತಿ ಪಡೆದ ನಂತರವಷ್ಟೇ ಮಾಧ್ಯಮದ ಜತೆ ಮಾತನಾಡಬಹುದು ಎಂದಿದೆ. ನ್ಯಾಯಾಲಯದ ಕ್ಷಮೆ ಕೇಳಿದ ಹಜೇಲಾ ತಾನು ರಿಜಿಸ್ಟ್ರಾರ್ ಜನರಲ್ ಅವರೊಡನೆ ಸಮಾಲೋಚನೆ ನಡೆಸಿದ ನಂತರವಷ್ಟೇ ಮಾಧ್ಯಮದ ಬಳಿ ಹೋಗಿದ್ದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News