ಭಾರತದಲ್ಲಿ ಪ್ರತಿ ಶಿಶುವಿಗೆ ನೀಡುವ ಲಸಿಕೆಯ ಬೆಲೆ ಕೇವಲ 147 ರೂ.: ಅಧ್ಯಯನ ವರದಿ

Update: 2018-08-07 10:45 GMT

ಹೊಸದಿಲ್ಲಿ, ಆ.7: ಭಾರತದಲ್ಲಿ ಪ್ರತಿ ಮಗುವಿಗೆ ಲಸಿಕಾ ಕಾರ್ಯಕ್ರಮದ ನಿಮಿತ್ತ ನೀಡುವ ಪ್ರತಿ ಡೋಸ್ ಲಸಿಕೆಯ ಬೆಲೆ ಕೇವಲ 147 ರೂ. ಎಂದು ತಳ ಮಟ್ಟದಲ್ಲಿ ನಡೆಸಲಾದ ಅಧ್ಯಯನವೊಂದು ಕಂಡುಕೊಂಡಿದೆ. ಲಸಿಕೆಯ ಮುಖಾಂತರ ತಡೆಯಬಲ್ಲ 11 ರೋಗಗಳ ವಿರುದ್ಧ 2.6 ಕೋಟಿ ನವಜಾತ ಶಿಶುಗಳಿಗೆ  ಲಸಿಕೆ ನೀಡುವ ಜಗತ್ತಿನ ಅತ್ಯಂತ ದೊಡ್ಡ ಲಸಿಕಾ ಕಾರ್ಯಕ್ರಮ ಭಾರತದಲ್ಲಿರುವುದು ವಿಶೇಷವಾಗಿದೆ.

ಪ್ರತಿ ಶಿಶುವಿಗೆ ನೀಡುವ ಲಸಿಕಾ ವೆಚ್ಚ ವಿವಿಧ ರಾಜ್ಯಗಳಲ್ಲಿ ರೂ 88ರಿಂದ ರೂ 187ರ   ತನಕವಿದ್ದು ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಕೇಂದ್ರ ಹಾಗೂ ಜಿಲ್ಲೆಗಳಲ್ಲಿ ಈ ವೆಚ್ಚ ಇನ್ನಷ್ಟು ಕಡಿಮೆಯಾಗಿದೆ ಎಂದು ಅಧ್ಯಯನ ತಿಳಿಸಿದೆ.

ಈ ಅಧ್ಯಯನಕ್ಕಾಗಿ ಬಿಹಾರ, ಗುಜರಾತ್, ಕೇರಳ, ಪಂಜಾಬ್, ಉತ್ತರ ಪ್ರದೇಶ, ಮೇಘಾಲಯ ಪಶ್ಚಿಮ ಬಂಗಾಳ ಸೇರಿದಂತೆ ಏಳು ರಾಜ್ಯಗಳ 24 ಜಿಲ್ಲೆಗಳ 225 ಸಾರ್ವಜನಿಕ ಆರೋಗ್ಯ ಕೇಂದ್ರಗಳಿಂದ ಮಾಹಿತಿ ಸಂಗ್ರಹಿಸಲಾಗಿತ್ತು.

ಮಗುವಿಗೆ ನೀಡಲಾಗುವ ಎಲ್ಲಾ ಲಸಿಕೆಗಳ ಒಟ್ಟು ಅಂದಾಜು ವೆಚ್ಚ ರೂ 1,285ರಿಂದ ರೂ 2,228ರಷ್ಟಾಗುತ್ತದೆ ಎಂದು ಬಿಎಂಜೆ ಗ್ಲೋಬಲ್ ಹೆಲ್ತ್  ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ವಿವರಗಳು ತಿಳಿಸಿವೆ.

ಭಾರತ ಸರಕಾರವು ತನ್ನ ಯುನಿವರ್ಸಲ್ ಇಮ್ಮ್ಯುನೈಸೇಶನ್ ಕಾರ್ಯಕ್ರಮಕ್ಕಾಗಿ ಪ್ರತಿ ಮಗುವಿಗೆ ರೂ 1,600ರಂತೆ   ಪ್ರತಿ ವರ್ಷ  90 ಲಕ್ಷ  ಲಸಿಕಾ ಕಾರ್ಯಕ್ರಮಗಳನ್ನು ನಡೆಸುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಮೀಸಲಿರಿಸಲಾದ ಮೊತ್ತ ನಾಲ್ಕು ಪಟ್ಟು ಅಧಿಕಗೊಂಡಿದೆ ಎಂದು ಅಧ್ಯಯನ ತಿಳಿಸಿದೆ.

ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಸುಷ್ಮಿತಾ ಚಟರ್ಜಿ ಈ  ಅಧ್ಯಯನದ ನೇತೃತ್ವ ವಹಿಸಿದ್ದರೆ ಪ್ರಿನ್ಸ್‍ಟನ್ ವಿವಿಯ ರಮಣನ್ ಲಕ್ಷ್ಮೀನಾರಾಯಣ್ ಕೂಡ ಈ ಅಧ್ಯಯನದ ಭಾಗವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News