ಸಾರಿಗೆ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

Update: 2018-08-07 13:33 GMT

ಬೆಂಗಳೂರು, ಆ.7: ಕೇಂದ್ರ ಸರಕಾರ ಮೋಟಾರು ವಾಹನ ತಿದ್ದುಪಡಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಸಾರಿಗೆ ಕಾರ್ಮಿಕರ ಮುಷ್ಕರಕ್ಕೆ ರಾಜ್ಯದೆಲ್ಲೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಗಳವಾರ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು.

ರಾಜಧಾನಿ ಬೆಂಗಳೂರು, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಮತ್ತು ಕರಾವಳಿ ಭಾಗದಲ್ಲೂ ಸಾರಿಗೆ ಕಾರ್ಮಿಕರ ಮುಷ್ಕರಕ್ಕೆ ಸೂಕ್ತ ಬೆಂಬಲ ದೊರೆತಿಲ್ಲ. ಜೊತೆಗೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದ ಕಾರಣ ಮುಷ್ಕರದ ಬಿಸಿ ತಗ್ಗಿತು. ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳ ಜಂಟಿ ವೇದಿಕೆ ಮುಷ್ಕರಕ್ಕೆ ಕರೆ ನೀಡಿದ್ದರೂ, ರಾಜಧಾನಿ ಬೆಂಗಳೂರಿನಲ್ಲಿ ಎಂದಿನಂತೆ ಖಾಸಗಿ ವಾಹನಗಳ ಸಂಚಾರ ಜೋರಾಗಿತ್ತು. ಜೊತೆಗೆ ಸಂಚಾರ ದಟ್ಟಣೆಯೂ ಎದ್ದು ಕಾಣತಿತ್ತು.

ನಗರದ ಕಾರ್ಪೋರೇಷನ್ ವೃತ್ತ, ಕೆಆರ್ ವೃತ್ತ, ಕೆಂಗೇರಿ ಮುಖ್ಯರಸ್ತೆ, ಎಂಜಿ ರಸ್ತೆ, ಗಾಂಧಿನಗರ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಹೆಬ್ಬಾಳ, ಅರಮನೆ ಮೈದಾನ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಕಾರು, ಆಟೋ ಇನ್ನಿತರೆ ವಾಹನಗಳ ಓಡಾಟದ ದೃಶ್ಯಗಳು ಸಾಮಾನ್ಯವಾಗಿತ್ತು. ಹುಬ್ಬಳ್ಳಿಯಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಿಬ್ಬಂದಿ ಬಂದ್‌ನಿಂದ ದೂರ ಉಳಿದರು. ಇತ್ತ ವಿಜಯಪುರದಲ್ಲೂ ಕೂಡ ಎಂದಿನಂತೆ ವಾಹನ ಸಂಚಾರ ಕಂಡು ಬಂತು. ಸರಕಾರಿ ಬಸ್‌ಗಳು, ಆಟೊ, ಖಾಸಗಿ ಬಸ್‌ಗಳ ಓಡಾಟ ಮಾಮೂಲಿಯಾಗಿತ್ತು.

ಬಾಗಲಕೋಟೆಯಲ್ಲಿ ಬಂದ್‌ಗೆ ಬೆಂಬಲ ಸಿಗಲಿಲ್ಲ. ಆಟೊ, ಸಾರಿಗೆ ಸೇವೆಗಳು ಎಂದಿನಂತೆ ಸುಗಮವಾಗಿತ್ತು. ದಾವಣಗೆರೆಯಲ್ಲಿ ಬಂದ್ ಬಿಸಿ ತಟ್ಟಲಿಲ್ಲ. ಸರಕಾರಿ, ಖಾಸಗಿ ಬಸ್ ಸಂಚಾರ ಯಥಾಸ್ಥಿತಿಯಲ್ಲಿತ್ತು.

ಕಾರು ಮತ್ತು ಆಟೋ  ವಾಹನಗಳ ಮಾಲಕರು ಮುಷ್ಕರಕ್ಕೆ ಬೆಂಬಲಿಸಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ಆದರೆ, ಓಲಾ, ಊಬರ್ ಸೇರಿದಂತೆ ಇನ್ನಿತರೆ ಕಂಪೆನಿಗಳ ಸಹಯೋಗದೊಂದಿಗೆ ಚಾಲನೆ ಮಾಡುವ ವಾಹನಗಳೂ ಎಂದಿನಂತೆ ಪ್ರಯಾಣಿಕರು ಸಾಗಿಸುವ ಕೆಲಸದಲ್ಲಿ ನಿರತರಾಗಿದ್ದರು.

ಬಸ್ಸು ಸಂಚಾರ: ಸಾರಿಗೆ ಕಾರ್ಮಿಕರ ಮುಷ್ಕರಕ್ಕೆ ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಸಿಬ್ಬಂದಿ, ನೌಕರರು ಬೆಂಬಲ ನೀಡದ, ಕಾರಣ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಿಲ್ಲ. ಬಿಎಂಟಿಸಿ ಚಾಲಕರು, ನಿರ್ವಾಹಕರು ನಿಗದಿ ಸಮಯಕ್ಕೆ ಕೆಲಸಕ್ಕೆ ಹಾಜರಾದ ದೃಶ್ಯ ಬಸ್ ಘಟಕಗಳಲ್ಲಿ ಕಂಡಿತು.

ನೌಕರರು ಹಾಜರು: ಸಾರಿಗೆ ಮುಷ್ಕರ ಕರೆಗೆ ಸ್ಪಂದಿಸದೆ, ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿಯ ನಾಲ್ಕು ವಿಭಾಗಗಳಲ್ಲಿ ಲಕ್ಷಾಂತರ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾದರು. ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಮೊದಲ ಪಾಳಿಗೆ ಬಿಎಂಟಿಸಿಯ 35 ಸಾವಿರ ನೌಕರರು ಸೇರಿದಂತೆ ರಾಜ್ಯದ 1.25 ಲಕ್ಷಕ್ಕೂ ಅಧಿಕ ನೌಕರರು ಕರ್ತವ್ಯಕ್ಕೆ ಹಾಜರಾದರು ಎಂದು ಸಾರಿಗೆ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಮೆರವಣಿಗೆ: ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಮತ್ತು ಮಾಲಕರು ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಪುರಭವನದಿಂದ ಫ್ರೀಡಂಪಾರ್ಕ್‌ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪ್ರಸ್ತುತ ಈ ಮಸೂದೆಯ ಜಾರಿಯಿಂದಾಗಿ ದೊಡ್ಡ ಪ್ರಮಾಣದ ಉದ್ಯೋಗ ನಾಶವಾಗಲಿದೆ. ಬಿಡಿಭಾಗಗಳ ವ್ಯಾಪಾರಿಗಳು, ರಸ್ತೆ ಬದಿಯ ಸಣ್ಣಪುಟ್ಟ ಮಳಿಗೆಗಳು ತಮ್ಮ ಜೀವನವನ್ನು ಕಳೆದುಕೊಳ್ಳಲಿದ್ದಾರೆ. ಹೀಗಾಗಿ, ಈ ಮಸೂದೆ ಹಿಂದಕ್ಕೆ ಪಡೆಯಲು ಸರಕಾರ ಮುಂದಾಗುವಂತೆ ಮುಷ್ಕರ ನಡೆಸಲಾಗುತ್ತಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದೆ, ಇದ್ದಲ್ಲಿ ಮುಂದೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಇಂಧನ ಬೆಲೆ ಕಳೆದ ನಾಲ್ಕು ವರ್ಷಗಳಲ್ಲಿ ಅಧಿಕವಾಗಿ ಹೆಚ್ಚಳವಾಗಿದೆ. ಇನ್ಯೂರೆನ್ಸ್ ಪ್ರೀಮಿಯಂ ಶೇಕಡ 100ರಷ್ಟು ಏರಿಕೆಯಾಗಿದೆ. ಟೋಲ್ ಶುಲ್ಕವೂ ಸಹ ಅಧಿಕವಾಗಿದೆ. ಹೀಗಿರುವಾಗ ಕಾರ್ಮಿಕರ ಜೀವನಾಧಾರಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಹೀಗಾಗಿ, ಕೇಂದ್ರ ಸರಕಾರದ ಮೋಟಾರು ವಾಹನ ತಿದ್ದುಪಡಿ ಮಸೂದೆ ಹಿಂಪಡೆಯಬೇಕು. ಆಟೊರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು/ಮಾಲಕರ ರಕ್ಷಿಸಬೇಕು ಎಂದು ಪ್ರತಿಭಟನಾ ನಿರತ ಸಾರಿಗೆ ಕಾರ್ಮಿಕರು ಒತ್ತಾಯಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್
ಸಾರಿಗೆ ಮುಷ್ಕರ ಕರೆ ಹಿನ್ನೆಲೆ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರತಿಭಟನಾ ಮೆರವಣಿಗೆ ನಡೆದ ಪುರಭವನ ಹಾಗೂ ಫ್ರೀಡಂ ಪಾರ್ಕ್ ವ್ಯಾಪ್ತಿಯಲ್ಲಿ ಭದ್ರತೆಗಾಗಿ 10 ಸಬ್ ಇನ್ಸ್‌ಪೆಕ್ಟರ್, 4 ಇನ್ಸ್‌ಪೆಕ್ಟರ್ ಸೇರಿದಂತೆ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಬದಲಾವಣೆ ಇಲ್ಲ
ಸಾರಿಗೆ ಕಾರ್ಮಿಕರು ಮುಷ್ಕರಕ್ಕೆ ಬೆಂಬಲ ನೀಡಿದ್ದರೂ, ಸಹ ನಗರದ ಪ್ರಯಾಣಿಕರಿಗೆ ಆತಂಕವೇ ಇರಲ್ಲಿಲ್ಲ. ಬಿಎಂಟಿಸಿ ಎಂದಿನಂತೆ ರಸ್ತೆಗಿಳಿದು ಪ್ರಯಾಣಿಕರನ್ನು ಸಾಗಿಸುವಲ್ಲಿ ನಿರತವಾಗಿತ್ತು. ಅದೇರೀತಿ, ಸರಕಾರಿ-ಖಾಸಗಿ ಕಚೇರಿಗಳು, ವ್ಯಾಪಾರ ವಹಿವಾಟು, ಜನದಟ್ಟಣೆಯಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆ ಕಂಡಿಲ್ಲ.

ಸಾರಿಗೆ ಸಂಸ್ಥೆಗಳು, ಆಟೋ, ಟ್ಯಾಕ್ಸಿ ಚಾಲಕರು ಮತ್ತು ಮಾಲಕರಿಗೆ ಮರಣ ಶಾಸನವೇ ಆಗಿರುವ ಕೇಂದ್ರ ಸರಕಾರದ ಮೋಟಾರ್ ವಾಹನ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು
-ತನ್ವೀರ್, ಓಲಾ-ಉಬರ್ ಚಾಲಕರು ಸಂಘದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News