ಕಾಯ್ದೆಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ: ಡಾ.ಕೃಪಾ ಆಳ್ವಾ

Update: 2018-08-08 13:17 GMT

ಬೆಂಗಳೂರು, ಆ.8: ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗಾಗಿರುವ ಕಾಯ್ದೆಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವಾ ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸೇವ್ ದಿ ಚಿಲ್ಡ್ರನ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ದಿ ಚೇಂಜ್ ಮೇಕರ್ ಸೀರೀಸ್ ವಿಷಯ ಕುರಿತು ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಪ್ರತಿದಿನವೂ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ವರದಿಯಾಗುತ್ತಿವೆ. ಆದರೆ, ಅವುಗಳನ್ನು ನಿಯಂತ್ರಿಸುವ ಸಲುವಾಗಿರುವ ಕಾಯ್ದೆಗಳು ನಿಷ್ಪ್ರಯೋಜಕವಾಗಿವೆ ಎಂದು ಹೇಳಿದರು.

ಅಪರಾಧ ಪ್ರಕರಣಗಳು ನಡೆದರೂ ಸಂಬಂಧಪಟ್ಟ ಕಾಯ್ದೆ ಅಡಿ ದೂರು ದಾಖಲಾಗುತ್ತಿಲ್ಲ. ಕೆಲವರು ದೂರು ದಾಖಲು ಮಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಯ್ದೆ ಕುರಿತು ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮರ್ಪಕವಾದ ತಿಳುವಳಿಕೆ ಇಲ್ಲ. ಹೀಗಾಗಿ, ಮೊದಲಿಗೆ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗಾಗಿರುವ ಕಾಯ್ದೆಗಳ ಕುರಿತು ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಅಭಿಪ್ರಾಯಿಸಿದರು.

ಲೈಂಗಿಕ ದೌರ್ಜನ್ಯ ಪ್ರಕರಣಗಳಡಿ ನೊಂದ ಮಕ್ಕಳಿಗೆ ಆ ಘಟನೆಯನ್ನು ತಕ್ಷಣ ಮರೆಸುವಂತಾಗಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಠಾಣೆಯಲ್ಲಿ ನಡೆಯುವ ವಿಚಾರಣೆ ಸಂದರ್ಭದಲ್ಲಿ ಪದೇಪದೇ ನೆನಪಿಸುತ್ತಾರೆ. ಇದು ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಆದುದರಿಂದ ಒಮ್ಮೆ ವಿಚಾರಣೆಯಲ್ಲಿಯೇ ಎಲ್ಲವನ್ನೂ ಅಂತ್ಯಗೊಳಿಸಬೇಕು ಎಂದು ಕೃಪಾ ಆಳ್ವಾ ಸಲಹೆ ನೀಡಿದರು

ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಮೇಲಿನ ಪ್ರಕರಣ ದಾಖಲೆ, ವಿಚಾರಣೆಯಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಆದರೂ ಲೈಂಗಿಕ ಪ್ರಕರಣಗಳಲ್ಲಿ ದೂರು ನೀಡಲು ಜನರು ಹಿಂದೇಟಾಕುತ್ತಾರೆ. ಹಾಗಾಗಿ, ಯಾವ ಮಹಿಳೆಯೂ ದೂರು ದಾಖಲು ಮಾಡಲು ಹಿಂಜರಿಯಬಾರದು. ಧೈರ್ಯದಿಂದ ದೂರು ದಾಖಲು ಮುಂದಾಗಬೇಕು ಎಂದು ಹೇಳಿದರು.

ಒಂಟಿ ಮಹಿಳೆ ಮಧ್ಯರಾತ್ರಿ ಭಯವಿಲ್ಲದೆ ಓಡಾಡಿದ ದಿನದಂದು ದೇಶಕ್ಕೆ ನಿಜವಾದ ಸ್ವಾತಂತ್ರ ಬಂದಂತೆ ಎಂದು ಮಹಾತ್ಮಗಾಂಧಿ ಹೇಳಿದ್ದರು. ಆದರೆ, ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಒಂಟಿಯಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಕೋಲಾರ ಜಿಲ್ಲೆಯ ವೇಮಗಲ್‌ನ ಸರಕಾರಿ ಶಾಲೆಯ ವಿದ್ಯಾರ್ಥಿನಿ ಕಲಾವತಿ ಆತಂಕ ವ್ಯಕ್ತಪಡಿಸಿದರು.

ಸಮಾಜದಲ್ಲಿ ಹೆಣ್ಣು ಎಂದರೆ ಕೀಳು ಭಾವನೆಯಿದೆ. ಹೆಣ್ಣು ಮಕ್ಕಳು ಕೇವಲ ಧ್ವನಿಯಾಗದೆ, ಶಕ್ತಿಯಾಗಬೇಕು. ಆಗ ಮಾತ್ರ ನಮ್ಮ ಹಕ್ಕು ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು.

ಪತ್ರಿಕೋದ್ಯಮ ವಿದ್ಯಾರ್ಥಿನಿ ಅಪೇಕ್ಷಾ ಮಾತನಾಡಿ, ಬಸ್ಸು, ರೈಲು ಹಾಗೂ ಸಾರ್ವಜನಿಕ ಸಾರಿಗೆಗಳಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು ಸಾಕಷ್ಟು ಮುಜುಗರ ಅನುಭವಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯಗಳು ಮಿತಿ ಮೀರಿದೆ ಎಂದ ಅವರು, ಇತ್ತೀಚಿಗೆ ಒಂದು ಹೆಣ್ಣು ಮಗು ಹುಟ್ಟುವುದೇ ಅಪರಾಧ ಎಂಬಂತೆ ನೋಡಲಾಗುತ್ತಿದೆ. ಈ ಮನೋಭಾವ ಹೋಗಬೇಕು. ಹೆಣ್ಣಿಗೆ ಸ್ವಾತಂತ್ರ, ಸಮಾನತೆ ನೀಡಬೇಕು ಎಂದು ಕೋರಿದರು. ಕಾರ್ಯಕ್ರಮದಲ್ಲಿ ಸೀ ಜಾಗೃತಿ ಸಮಿತಿಯ ಸದಸ್ಯರಾದ ಗೀತಾ ಮೆನನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಹಿಳೆ, ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆಯನ್ನು ತಡೆಯಲು ಸಾಧ್ಯವಾಗದಿರುವುದು ಪುರುಷ ಸಮುದಾಯಕ್ಕೆ ಮಾಡಿಕೊಂಡಿರುವ ಅವಮಾನ. ನಮ್ಮ ಮಹಿಳೆಯರನ್ನು ನಾವೇ ರಕ್ಷಿಸಿಕೊಳ್ಳಬೇಕು. ಅದು ಬಿಟ್ಟು ಮಹಿಳೆಯರ ಮೇಲಿನ ದೌರ್ಜನ್ಯ ಮಾಡುವುದು ಹಾಗೂ ಅದರ ನಿಯಂತ್ರಣದ ಬಗ್ಗೆ ಮಾತನಾಡುವುದು ನಾಚಿಕೆಯ ಸಂಗತಿ.
-ಮುರಳಿ, ಚಿತ್ರನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News