ಮಝಫ್ಫರ್‌ಪುರ್ ಆಶ್ರಯ ಮನೆ ಅತ್ಯಾಚಾರ ಪ್ರಕರಣ: ಬಿಹಾರ ಸಚಿವೆ ಮಂಜು ವರ್ಮಾ ರಾಜೀನಾಮೆ

Update: 2018-08-08 14:10 GMT

 ಪಾಟ್ನಾ, ಆ. 8: ನಿತೀಶ್ ಕುಮಾರ್ ನೇತೃತ್ವದ ಸಂಪುಟಕ್ಕೆ ಬಿಹಾರದ ಸಮಾಜ ಕಲ್ಯಾಣ ಸಚಿವೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಮುಝಫ್ಫರ್‌ಪುರ್‌ನ ಆಶ್ರಯ ನಿವಾಸದಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಪ್ರಧಾನ ಆರೋಪಿಯೊಂದಿಗೆ ಬಿಹಾರದ ಸಾಮಾಜಿಕ ಕಲ್ಯಾಣ ಸಚಿವೆ ಮಂಜು ವರ್ಮಾ ಅವರ ಪತಿ ಚಂಡೇಶ್ವರ್ ವರ್ಮಾ ಅವರು ಸಂಬಂಧ ಹೊಂದಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಜು ವರ್ಮಾ ರಾಜೀನಾಮೆ ನೀಡಿದ್ದಾರೆ.

 ಪಾಟ್ನಾದಲ್ಲಿರುವ 7 ಸರ್ಕ್ಯುಲರ್ ರಸ್ತೆ ಕಚೇರಿಯಲ್ಲಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿರುವ ಮಂಜು ವರ್ಮಾ ಅವರು ತಮ್ಮ ರಾಜೀನಾಮೆ ಸಲ್ಲಿಸಿದರು. ಅವರ ರಾಜೀನಾಮೆ ಪತ್ರವನ್ನು ಕೂಡಲೇ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರಿಗೆ ರವಾನಿಸಲಾಯಿತು. ಮಲ್ಲಿಕ್ ದಿಲ್ಲಿಯಲ್ಲಿ ಇರುವುದರಿಂದ ರಾಜೀನಾಮೆ ಪತ್ರ ಸ್ವೀಕಾರಕ್ಕಾಗಿ ದಿಲ್ಲಿಗೆ ಫ್ಯಾಕ್ಸ್ ಮೂಲಕ ರವಾನಿಸಲಾಯಿತು.

 ‘‘ಮಾಧ್ಯಮ ಹಾಗೂ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿರುವುದರಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ. ಆದರೆ, ನನಗೆ ಸಿಬಿಐ ಹಾಗೂ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಸತ್ಯ ಬೆಳಕಿಗೆ ಬರಲಿದೆ ಹಾಗೂ ನನ್ನ ಪತಿ ನಿರ್ದೋಷಿಯಾಗಿ ಹೊರಬರಲಿದ್ದಾರೆ ಎಂಬ ನಂಬಿಕೆ ನನಗಿದೆ’’ ಎಂದು ಅವರು ಹೇಳಿದ್ದಾರೆ. ಮುಝಾಫ್ಫರ್ ಪ್ರಕರಣದ ಪ್ರಧಾನಿ ಆರೋಪಿಯಾಗಿರುವ ಬ್ರಿಜೇಶ್ ಠಾಕೂರ್ ಮುಝಾಫ್ಫರ್‌ಪುರ್ ವಿಶೇಷ ಪೋಸ್ಕೋ ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ‘‘ನನಗೆ ಸಚಿವರ ಪತಿಯೊಂದಿಗೆ ವಿಶೇಷ ಸಂಬಂಧ ಇಲ್ಲ. ಅವರು ನನ್ನೊಂದಿಗೆ ರಾಜಕೀಯ ಹಾಗೂ ಇತರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು’’ ಎಂದು ಹೇಳಿದ ಎರಡು ಗಂಟೆಗಳ ಬಳಿಕ ಸಚಿವೆ ಮಂಜು ವರ್ಮಾ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News