ಶಾಶ್ವತ ಭೂ ಸ್ವಾಧೀನದ ಬದಲು ಗುತ್ತಿಗೆ ಆಧಾರದ ಮೇಲೆ ಪಡೆಯಲು ಚಿಂತನೆ: ಸಚಿವ ಶಿವಕುಮಾರ್

Update: 2018-08-08 14:28 GMT

ಬೆಂಗಳೂರು, ಆ. 8: ಆಲಮಟ್ಟಿ, ಎತ್ತಿನಹೊಳೆ ಯೋಜನೆಗೆ ರೈತರ ಜಮೀನನ್ನು ಶಾಶ್ವತವಾಗಿ ಭೂ ಸ್ವಾಧೀನ ಮಾಡಿಕೊಳ್ಳುವ ಬದಲು ಬಾಡಿಗೆ ಅಥವಾ ಗುತ್ತಿಗೆ ಆಧಾರದ ಮೇಲೆ ಪಡೆಯಲು ಚಿಂತನೆ ನಡೆಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾವಗಡ ಸೋಲಾರ್ ಯೋಜನೆಗೆ ಇಂಧನ ಇಲಾಖೆ ಗುತ್ತಿಗೆ ಆಧಾರದ ಮೇಲೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಇದೀಗ ಜಲಸಂಪನ್ಮೂಲ ಇಲಾಖೆ ಅದೇ ಮಾದರಿ ಅನುಸರಿಸಲು ಉದ್ದೇಶಿಸಿದೆ ಎಂದರು.

ಈ ಸಂಬಂಧ ರೈತರು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಈ ಬಗ್ಗೆ ಸಂಸತ್ ಅಧಿವೇಶನದ ಬಳಿಕ ಮತ್ತೊಮ್ಮೆ ಸಭೆ ನಡೆಸಿ ಭೂಸ್ವಾಧೀನ ಸಂಬಂಧ ಚರ್ಚಿಸಲಾಗುವುದು ಎಂದ ಅವರು, ಭೂಸ್ವಾಧೀನ ಕಾರ್ಯಕ್ಕೆ ಆರ್ಥಿಕ ಇಲಾಖೆ ಹಣ ಹೊಂದಿಸಿಕೊಳ್ಳಬೇಕಿದೆ ಎಂದರು.

ನಿಷೇಧಕ್ಕೆ ಚಿಂತನೆ: ಬಳ್ಳಾರಿ ಸೇರಿ ಕೆಲ ಭಾಗಗಳಲ್ಲಿ ಕಾಲುವೆಗಳಿಗೆ ಪಂಪ್‌ಸೆಟ್ ಅಳವಡಿಸಿ ವ್ಯವಸಾಯಕ್ಕೆ ನೀರು ಪಡೆಯುತ್ತಿದ್ದಾರೆ. ಹೀಗಾಗಿ ಕಾಲುವೆಗೆ ಪಂಪ್‌ಸೆಟ್ ಅಳವಡಿಸಿ ನೀರು ಪಡೆಯುವುದನ್ನು ನಿಷೇಧಿಸಲು ಉದ್ದೇಶಿಸಿದೆ. ಎತ್ತಿನಹೊಳೆ ಯೋಜನೆಯಲ್ಲೂ ರೈತರು ಇದೇ ಮಾದರಿಯಲ್ಲಿ ನೇರವಾಗಿ ನೀರು ಬಳಕೆಗೆ ಮುಂದಾದರೆ ಕೋಲಾರದ ಬಯಲುಸೀಮೆಗೆ ನೀರು ತಲುಪುವುದಿಲ್ಲ ಎಂದರು.

ದೂರು ನೀಡಲಿ: ಕೆಎಸ್ಸಾರ್ಟಿಸಿ ಹೌಸಿಂಗ್ ಸೊಸೈಟಿ 10 ಕೋಟಿ ರೂ.ವಂಚನೆ ವಿಚಾರದಲ್ಲಿ ನನ್ನ ಹೆಸರು ಬಳಸುವ ಆಪಾದನೆ ಸಂಬಂಧ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ನನ್ನ ಹೆಸರು ಬಳಕೆ ಮಾಡುತ್ತಿರುವುದು ಬೇಸರ ಮೂಡಿಸಿದೆ. ವಂಚನೆ ಮಾಡಿದವರಿಗೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

‘ರಾಮನಗರದ ಬದಲಿಗೆ ಮೈಸೂರಿನಲ್ಲೇ ಚಿತ್ರನಗರಿ ಮಾಡಬೇಕೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಈಗಾಗಲೇ ಸಿಎಂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಅದು ಸಿಎಂಗೆ ಬಿಟ್ಟ ವಿಷಯ. ನಾನು ಕೇವಲ ರಾಮನಗರ ಜಿಲ್ಲೆಗಷ್ಟೇ ಸಚಿವನಲ್ಲ, ಇಡೀ ರಾಜ್ಯಕ್ಕೆ ಸಚಿವನಾಗಿದ್ದೇನೆ’
-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News