ಪ್ರತ್ಯೇಕ ಮಾದಕ ವಸ್ತು ಮಾರಾಟ ಪ್ರಕರಣ: 6.4 ಕೆಜಿ ಗಾಂಜಾ ಜಪ್ತಿ, 9 ಜನರ ಬಂಧನ

Update: 2018-08-08 14:50 GMT

ಬೆಂಗಳೂರು, ಆ.8: ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಒಂಬತ್ತು ಜನರನ್ನು ಬಂಧಿಸಿ, 6.4 ಕೆಜಿ ಗಾಂಜಾ ಜಪ್ತಿ ಮಾಡುವಲ್ಲಿ ನಗರದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹದೇವಪುರ ಪೊಲೀಸ್ ಠಾಣಾ ಪೊಲೀಸರು, ನಗರದ ತೂಬರಹಳ್ಳಿಯಲ್ಲಿ ವಾಸವಿದ್ದ ಪೂರ್ಣ ಗೂಕು(38) ಎಂಬಾತನನ್ನು ಬಂಧಿಸಿ 3.75 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈತ ಪಶ್ಚಿಮಬಂಗಾಳದ ಮುದ್ರಕೂಲ್ ಗ್ರಾಮದ ನಿವಾಸಿ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಎಚ್‌ಎಎಲ್ ಠಾಣಾ ಪೊಲೀಸರು ಅಸ್ಸಾಂ ರಾಜ್ಯದ ತಿನ್‌ಸೂಕಿಯಾ ಠಾಣಾ ವ್ಯಾಪ್ತಿಯ ಚಂದ್ರಪ್ರಸಾದ್ ಎಂಬಾತನನ್ನು ಬಂಧಿಸಿ 1.5 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈತ ಸರ್ಜಾಪುರದ ಕೈಗೊಂಡ್ರನಹಳ್ಳಿಯಲ್ಲಿ ವಾಸವಾಗಿದ್ದ.

ಮಾರತಹಳ್ಳಿ ಪೊಲೀಸರು ಓರಿಸ್ಸಾ ರಾಜ್ಯದ ಮುನ್ನಾ ಖಾನ್(36) ಹಾಗೂ ಸಪ್ತಗಿರಿ ಲೇಔಟ್ ನಿವಾಸಿ ವಾಸುದೇವ ಎಂಬಾತನನ್ನು ಬಂಧಿಸಿ 900 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಅದೇ ರೀತಿ, ಬೆಳ್ಳಂದೂರು ಠಾಣಾ ಪೊಲೀಸರು ಕಾಡುಬಿಸನಹಳ್ಳಿಯ ಮುನಿಯಪ್ಪ ಎಂಬಾತನನ್ನು ಬಂಧಿಸಿ 300 ಗ್ರಾಂ ಗಾಂಜಾ ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ವಿದೇಶಿ ಪ್ರಜೆಗಳ ಸೆರೆ: ಮಾದಕ ದ್ರವ್ಯಗಳಾದ ಕೊಕೈನ್ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಡಿ ನೈಜೀರಿಯಾ ದೇಶದ ನಾಲ್ವರನ್ನು ಕೆಆರ್ ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇವರ ವಶದಲ್ಲಿದ್ದ 30 ಗ್ರಾಂ ಕೊಕೈನ್, 10 ಎಂಡಿಎಂಎ ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ ಎಂದು ನಗರದ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News