ಮೀಸಲಾತಿಗೆ ಆಗ್ರಹಿಸಿ ಮರಾಠ ಕ್ರಾಂತಿ ಮೋರ್ಚಾದಿಂದ ಇಂದು ಮಹಾರಾಷ್ಟ್ರ ಬಂದ್‌

Update: 2018-08-09 07:26 GMT

ಮುಂಬೈ, ಆ.9: ಮೀಸಲಾತಿ ಬೇಡಿಕೆ ಮುಂದಿಟ್ಟುಕೊಂಡು ಮರಾಠ ಕ್ರಾಂತಿ ಮೋರ್ಚಾ ಗುರುವಾರ ಮಹಾರಾಷ್ಟ್ರದಾದ್ಯಂತ 12 ಗಂಟೆಗಳ ಬಂದ್‌ಗೆ ಕರೆ ನೀಡಿದೆ. ಔರಂಗಾಬಾದ್‌ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ಯುನಿವರ್ಸಿಟಿ ವ್ಯಾಪಿಗೆ ಬರುವ ಎಲ್ಲ ವಿಭಾಗಗಳು ಹಾಗೂ ಕಾಲೇಜುಗಳನ್ನು ಬಂದ್ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ.

ಔರಂಗಾಬಾದ್‌ನಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಧರಣಿ ನಡೆಸಿದರು. ಕಳೆದ ಬಾರಿ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದಿರುವ ಕಾರಣ ಔರಂಗಾಬಾದ್‌ನಲ್ಲಿ ಹೆಚ್ಚುವರಿ ಭದ್ರತೆಯನ್ನು ಏರ್ಪಡಿಸಲಾಗಿದೆ.

ಮರಾಠಿಗರ ಮತ್ತೊಂದು ಸಂಘಟನೆ ಮಹಾರಾಷ್ಟ್ರ ಸಕಾಲ್ ಮರಾಠ ಸಮಾಜ್ ಕೂಡ ಗುರುವಾರ ಮೀಸಲಾತಿ ವಿಷಯದಲ್ಲಿ ರಾಜ್ಯಾದ್ಯಂತ ಬಂದ್ ಕರೆ ನೀಡಿರುವ ಕಾರಣ ಮಹಾರಾಷ್ಟ್ರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ರಾಜ್ಯಾದ್ಯಂತ ಬೆಳಗ್ಗೆ 8 ರಿಂದ ಸಂಜೆ 6ರ ತನಕ ರಾಜ್ಯವ್ಯಾಪಿ ಶಾಂತಿಯುತವಾಗಿ ಬಂದ್ ನಡೆಯಲಿದೆ ಎಂದು ಸಕಾಲ್ ಮರಾಠ ಸಮಾಜದ ಮುಖಂಡ ಅಮೋಲ್ ಜಾದವ್‌ರಾವ್ ಹೇಳಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಪುಣೆ ಜಿಲ್ಲೆಯ ಶಿರೂರ್, ಖೇಡ್, ಬಾರಾಮತಿ, ಜುನ್ನಾರ್, ಮವಾಲ್, ದೌಂಡ್ ಹಾಗೂ ಭೋರ್‌ನಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ದೇಶದ ವಾಣಿಜ್ಯನಗರಿ ಮುಂಬೈನಲ್ಲಿ ಬಂದ್ ಬಿಸಿ ತಟ್ಟಿಲ್ಲ. ಅಂಗಡಿ-ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದು ಜನಜೀವನ ಸಾಮಾನ್ಯ ಸ್ಥಿತಿಯಲ್ಲಿದೆ. ರಸ್ತೆ, ರೈಲು, ವಿಮಾನ ಸಂಚಾರಕ್ಕೆ ಧಕ್ಕೆಯಾಗಿಲ್ಲ. ಆದರೆ ಪುಣೆಯಲ್ಲಿ ಅಂಗಡಿಗಳು, ವಾಣಿಜ್ಯ ವಹಿವಾಟುಗಳು, ಶಾಲಾ-ಕಾಲೇಜುಗಳು ಬಂದ್ ಆಗಿವೆ. ತರಕಾರಿ ಮಾರುಕಟ್ಟೆಗಳು ಬಂದ್ ಆಗಿವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪುಣೆ ನಗರ ಹಾಗೂ ಗ್ರಾಮೀಣ ಪೊಲೀಸರನ್ನು ನಗರ ಹಾಗೂ ಜಿಲ್ಲೆಗಳಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.

ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ಬಗ್ಗೆ ಲಿಖಿತ ಭರವಸೆ ನೀಡಬೇಕು ಹಾಗೂ ಇದನ್ನು ಹೇಗೆ ಜಾರಿ ಮಾಡಲಾಗುತ್ತದೆ ಎಂಬ ಕುರಿತು ನೀಲಿ ನಕ್ಷೆಯನ್ನು ರೂಪಿಸಬೇಕೆಂದು ಮರಾಠ ಸಮುದಾಯ ಆಗ್ರಹಿಸುತ್ತಿವೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತನ್ನ ಸರಕಾರ ಮೀಸಲಾತಿ ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದರು. ಆದಾಗ್ಯೂ ಪ್ರತಿಭಟನೆಗಳು ಮುಂದುವರಿದಿವೆ.

ಮತ್ತೊಂದು ಮರಾಠಿ ಸಂಘಟನೆಯು ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯ ತನಕ ಬಾಂದ್ರಾದಲ್ಲಿರುವ ಮುಂಬೈ ಉಪನಗರ ಕಲೆಕ್ಟರ್ ಕಚೇರಿ ಮುಂಭಾಗ ಧರಣಿ ನಡೆಸಲು ನಿರ್ಧರಿಸಿದೆ. ಮುಂಬೈನಲ್ಲಿ ಬಂದ್ ಆಚರಿಸುವುದಿಲ್ಲ ಎಂದು ಹೇಳಿದೆ. ಮಹಾರಾಷ್ಟ್ರ ಬಂದ್‌ಗೆ ಕೆಲವು ಮುಸ್ಲಿಂ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News