ಕೇರಳದಲ್ಲಿ ಮುಂದುವರಿದ ಮಳೆ: 4,000 ಜನರ ಸ್ಥಳಾಂತರ

Update: 2018-08-10 14:47 GMT

ತಿರುವನಂತಪುರಂ, ಆ.10: ಕೇರಳದಲ್ಲಿ ಸತತ ಮಳೆ ಭಾರಿ ಅನಾಹುತವನ್ನುಂಟು ಮಾಡಿದೆ. ಮಳೆಯಿಂದಾಗಿ ಕೇರಳದಲ್ಲಿ ಈ ವರೆಗೆ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿದೆ. 4,000 ಜನರನ್ನು ಸ್ಥಳಾಂತರಿಸಲಾಗಿದೆ.

ರಾಜ್ಯದ  ಬಹುತೇಕ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಇದೇ ಕಾರಣಕ್ಕೆ ಇಡುಕ್ಕಿ, ಚೆರುಥೋಣಿ, ಮುಲ್ಲಾ ಪೆರಿಯಾರ್, ಮಲಂಪುಂಜಾ, ತೆನ್ಮಾಲಾ ಡ್ಯಾಂ ಸೇರಿದಂತೆ ಕೇರಳದ ಎಲ್ಲ 24 ಡ್ಯಾಂಗಳ ಗೇಟ್ ಗಳನ್ನು ತೆರೆಯಲಾಗಿದ್ದು,  ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
40 ವರ್ಷಗಳಲ್ಲಿ ಇದೇ ಮೊದಲ ಬಾರಿ ಇಡುಕ್ಕಿ ಡ್ಯಾಮ್ ನ ಎಲ್ಲ ಗೇಟ್ ಗಳನ್ನು ತೆರೆಯಲಾಗಿದೆ.

ಇಡುಕ್ಕಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಭಾರಿ ನಷ್ಟ ಉಂಟಾಗಿದ್ದು, ನೂರಾರು ಮನೆಗಳು ನೀರಿನಿಂದ ಕೊಚ್ಚಿ ಹೋಗಿದೆ. 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.  ಮಲಪ್ಪುರಂನಲ್ಲಿ 5, ವಯನಾಡ್ 4, ಎರ್ನಾಕುಳಂ 2, ಕಣ್ಣೂರು 2 , ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ ನಲ್ಲಿ ಒಬ್ಬರು ಮಳೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ತಕ್ಷಣ ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಮನವಿ

ಧಾರಾಕಾರ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಉಕ್ಕಿ ಹರಿಯುತ್ತಿರುವ ಇಡುಕ್ಕಿ ಜಲಾಶಯದಿಂದ ನೀರನ್ನು ಹೊರಗೆ ಬಿಡಲು ಶುಕ್ರವಾರ ಇನ್ನೆರಡು ದ್ವಾರಗಳನ್ನು ತೆರೆದಿರುವ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿರುವ ಎರ್ನಾಕುಲಂ ಜಿಲ್ಲೆಯ ಜನರಿಗೆ ತಕ್ಷಣ ರಕ್ಷಣಾ ಹಾಗೂ ಪರಿಹಾರ ಒದಗಿಸುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಜಲಾಶಯದ ಬಳಿ ವಾಸಿಸುತ್ತಿರುವ ಸಾವಿರಾರು ಜನರನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದ್ದು ಸರಕಾರ ಯುದ್ಧೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News