ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಬಗ್ಗೆ ಮೋದಿ ಹೇಳಿಕೆ ರಾಜ್ಯಸಭೆಯ ದಾಖಲೆಗಳಿಂದ ಹೊರಕ್ಕೆ

Update: 2018-08-10 16:11 GMT

ಹೊಸದಿಲ್ಲಿ, ಆ.10: ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ವಿಪಕ್ಷಗಳ ಅಭ್ಯರ್ಥಿಯಾಗಿ ಆಗಸ್ಟ್ 9ರಂದು ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಕಾಂಗ್ರೆಸ್ ರಾಜ್ಯಸಭಾ ಸಂಸದ ಬಿ.ಕೆ. ಹರಿಪ್ರಸಾದ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ನೀಡಿದ ಹೇಳಿಕೆಯನ್ನು ರಾಜ್ಯಸಭೆಯ ದಾಖಲೆಗಳಿಂದ ತೆಗೆದು ಹಾಕಲಾಗಿದೆ.

ಹರಿಪ್ರಸಾದ್ ಅವರು ಎನ್‍ ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರೆದುರು ಸೋತ ನಂತರ ಪ್ರಧಾನಿಯ ಈ ವಿವಾದಾತ್ಮಕ ಹೇಳಿಕೆ ಬಂದಿತ್ತು.

ಪ್ರಧಾನಮಂತ್ರಿಯೊಬ್ಬರ ಹೇಳಿಕೆಯ ಭಾಗವನ್ನು ಸಂಸತ್ತಿನ ದಾಖಲೆಗಳಿಂದ ತೆಗೆದು ಹಾಕಿದ್ದು ಪ್ರಾಯಶಃ ಇದೇ ಮೊದಲ ಬಾರಿಯಾಗಿದೆ. ಹರಿವಂಶ್ ನಾರಾಯಣ್ ಸಿಂಗ್ ಆವರು ಹರಿಪ್ರಸಾದ್ ವಿರುದ್ಧ ಸುಲಭವಾಗಿ ಜಯ ಸಾಧಿಸಿದ ನಂತರ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ತಮ್ಮ ಹೇಳಿಕೆಯಲ್ಲಿ ಬಿ.ಕೆ. ಹರಿಪ್ರಸಾದ್ ಅವರ ಹೆಸರಿಗೆ ಸಂಬಂಧಿಸಿದಂತೆ 'ಬಿಕಾ ನಹೀ' ಎಂಬ ಪದ ಉಪಯೋಗಿಸಿದ್ದರು.

ಇದಕ್ಕೆ ಹರಿಪ್ರಸಾದ್ ಅವರು ಕೂಡಲೇ ಆಕ್ಷೇಪ ಸೂಚಿಸಿದ್ದರು. ``ಪ್ರಧಾನಿ ತಮ್ಮ ಹುದ್ದೆಯ ಘನತೆಯನ್ನು ತಗ್ಗಿಸಿದ್ದಾರೆ ಹಾಗೂ  ಸದನದ ಘನತೆಗೂ ಚ್ಯುತಿ ತಂದಿದ್ದಾರೆ'' ಎಂದು ಹರಿಪ್ರಸಾದ್ ಹೇಳಿದ್ದರು.

ಹರಿಪ್ರಸಾದ್ ಅವರ ಹೆಸರಿಗೆ ಸಂಬಂಧಿಸಿದಂತೆ ಪ್ರಧಾನಿ ತಮ್ಮ ಭಾಷಣದಲ್ಲಿ ಉಪಯೋಗಿಸಿದ ಪದವನ್ನು ಸದನದ ದಾಖಲೆಗಳಿಂದ ತೆಗೆದು ಹಾಕಲಾಗಿರುವ ಬಗ್ಗೆ ರಾಜ್ಯಸಭಾ ಸಚಿವಾಲಯ ದೃಢಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News