ಇವರಿರುವಾಗ ದೇಶದ ನಾಶಕ್ಕೆ ಅನ್ಯರು ಯಾಕೆ?

Update: 2018-08-11 06:19 GMT

ದೇಶದೊಳಗೆ ಅಸ್ಥಿರತೆ, ಅರಾಜಕತೆಯನ್ನು ಸೃಷ್ಟಿಸಲು ಸನಾತನ ಸಂಸ್ಥೆಯ ನೇತೃತ್ವದಲ್ಲಿ ಕೇಸರಿ ಉಗ್ರರು ಸಂಘಟಿತರಾಗಿದ್ದಾರೆ ಎನ್ನುವ ಆರೋಪ ದಿನದಿಂದದಿನಕ್ಕೆ ಪುಷ್ಟಿ ಪಡೆಯುತ್ತಿರುವ ದಿನಗಳಲ್ಲೇ, ದೇಶವನ್ನು ಬೆಚ್ಚಿ ಬೀಳಿಸುವ ಸಂಚೊಂದನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ವಿಫಲಗೊಳಿಸಿದೆ. ಮಹಾರಾಷ್ಟ್ರದಲ್ಲಿ ಸನಾತನ ಸಂಸ್ಥೆಗೆ ಸೇರಿದ ಕಾರ್ಯಕರ್ತನ ನಿವಾಸಕ್ಕೆ ದಾಳಿ ನಡೆಸಿರುವ ಎಟಿಎಸ್, ಭಾರೀ ಪ್ರಮಾಣದ ಸ್ಫೋಟಕಗಳನ್ನು, ಬಾಂಬ್ ಕಚ್ಚಾ ಸಾಮಗ್ರಿಗಳನ್ನು ಜೊತೆಗೆ ಕೇಸರಿ ಉಗ್ರವಾದವನ್ನು ಹರಡುವ ಸಾಹಿತ್ಯ ಪುಸ್ತಕಗಳನ್ನು ವಶಕ್ಕೆ ಪಡೆದುಕೊಂಡಿದೆ. ಇಷ್ಟೇ ಅಲ್ಲ, ಇವರ ಹಿಂದಿರುವ ಇನ್ನಿತರರಲ್ಲಿ ಒಬ್ಬೊಬ್ಬರನ್ನೇ ಬಂಧಿಸಲು ಶುರು ಹಚ್ಚಿದೆ.

ಈ ದಾಳಿಯಿಂದಾಗಿ ಸ್ವಾತಂತ್ರೋತ್ಸವದ ಹೊತ್ತಿಗೆ ಈ ದೇಶದಲ್ಲಿ ನಡೆಯಬಹುದಾದ ಭೀಕರ ದುರಂತವೊಂದು ತಪ್ಪಿದಂತಾಗಿದೆ. ಇಲ್ಲವಾದರೆ ದೇಶ, ಇನ್ನೊಂದು ಮಾಲೇಗಾಂವ್‌ನಂತಹ ಭಾರೀ ಸ್ಫೋಟಕ್ಕೆ ಸಿಲುಕಿ ತತ್ತರಿಸಬೇಕಾಗಿತ್ತು. ಈಗಾಗಲೇ ಮಾಲೇಗಾಂವ್, ಮಕ್ಕಾ ಮಸೀದಿ, ಅಜ್ಮೀರ್ ಮತ್ತು ಸಂಜೋತಾ ರೈಲು ಸ್ಫೋಟಗಳಲ್ಲಿ ಗುರುತಿಸಿಕೊಂಡಿರುವ ಕೇಸರಿ ಉಗ್ರರು, ದೇಶಾದ್ಯಂತ ಇನ್ನಷ್ಟು ಆಳವಾಗಿ ಮತ್ತು ವಿಶಾಲವಾಗಿ ಹರಡಿಕೊಂಡಿದ್ದಾರೆ ಎನ್ನುವುದನ್ನು ಈ ಪ್ರಕರಣ ಒತ್ತಿ ಹೇಳಿದೆ. ಈ ಮೂಲಕ ದೇಶ, ಒಂದೆಡೆ ವಿದೇಶಿ ಉಗ್ರರ ಸವಾಲನ್ನು ಎದುರಿಸುತ್ತಿದ್ದರೆ, ಇನ್ನೊಂದೆಡೆ ದೇಶಭಕ್ತಿಯ ಮುಖವಾಡದ ಧರಿಸಿ ದೇಶದೊಳಗಡೆ ಬೇರು ಬಿಟ್ಟಿರುವ ಉಗ್ರರ ಸವಾಲನ್ನೂ ಎದುರಿಸಬೇಕಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ಸನಾತನ ಸಂಸ್ಥೆ ಇಂದು ನಿನ್ನೆಯದಲ್ಲ. ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿದ ಹಿಂದೂ ಮಹಾಸಭಾ ಎಂಬ ಪೂತನಿ ಹೆತ್ತ ವಿಷ ಸಂತಾನಗಳು ಇವು. ಬ್ರಿಟಿಷರ ಜೊತೆಗೆ ಗುಟ್ಟಾಗಿ ಕೈ ಜೋಡಿಸಿ, ಸ್ವಾತಂತ್ರ ಹೋರಾಟದಿಂದ ವಿಮುಖರಾದ ಶಕ್ತಿಗಳು, ಈ ದೇಶದಲ್ಲಿ ಮತ್ತೆ ವರ್ಣವ್ಯವಸ್ಥೆ, ಮನು ಸಂವಿಧಾನವನ್ನು ಜಾರಿಗೊಳಿಸಲು ಬೇರೆ ಬೇರೆ ಹೆಸರುಗಳಲ್ಲಿ ಸಂಘಟಿತವಾದವು. ಅಭಿನವಭಾರತ, ಸನಾತನ ಸಂಸ್ಥೆ, ಹಿಂದೂ ಮಹಾಸಭಾ ಹೀಗೆ ಹೆಸರುಗಳು ಹಲವಾದರೂ, ಅವುಗಳ ಗುರಿ ಒಂದೇ ಆಗಿತ್ತು. ಸಂವಿಧಾನದ ತಳಹದಿಯಲ್ಲಿ ನಿಂತಿರುವ ಈ ದೇಶದ ಪ್ರಜಾಸತ್ತೆಯನ್ನು ನಾಶ ಪಡಿಸಿ, ಅಲ್ಲಿ ವರ್ಣ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಮನು ಸಂವಿಧಾನವನ್ನು ಸ್ಥಾಪಿಸುವುದು ಅವರ ಗುರಿಯಾಗಿತ್ತು. ಈ ಕಾರಣಕ್ಕಾಗಿಯೇ ಅಭಿನವ ಭಾರತವನ್ನು ಕಟ್ಟಿದ ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮೆಯಾಚನೆ ಪತ್ರವನ್ನು ಬರೆದು, ಸದಾ ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಹೇಳಿ ಸ್ವಾತಂತ್ರ ಹೋರಾಟದಿಂದ ಹಿಂದೆ ಸರಿದರು. ಆರೆಸ್ಸೆಸ್ ಸಹಿತ ಯಾರಿಗೂ ಈ ದೇಶ ಸ್ವತಂತ್ರಗೊಂಡು, ಕೆಳವರ್ಗ, ಶೂದ್ರವರ್ಗ ಅಕ್ಷರಸ್ಥರಾಗಿ, ದೇಶದ ಚುಕ್ಕಾಣಿ ಹಿಡಿಯುವುದು ಬೇಕಾಗಿರಲಿಲ್ಲ. ಸ್ವತಂತ್ರ ಭಾರತದಲ್ಲಿ ಕೆಳ ಜಾತಿಗಳು ಮತ್ತು ಮೇಲ್ಜಾತಿಗಳು ಸಮಾನವಾಗುವುದನ್ನು ಯೋಚಿಸಲು ಅವರು ಸಿದ್ಧರಿರಲಿಲ್ಲ. ಈ ಭಾರತ, ಅಂದಿನ ಹಿಂದೂ ಮಹಾ ಸಭಾ ಬಯಸಿದ ಭಾರತವಾಗಿರಲಿಲ್ಲ. ಆದುದರಿಂದಲೇ ಈ ಭಾರತವನ್ನು ವಿಚ್ಛಿದ್ರಗೊಳಿಸಲು ಸಂಘಟನೆಗಳನ್ನು ಸ್ಥಾಪಿಸಿದರು.

ಈ ದೇಶದ ಸ್ವಾತಂತ್ರೋತ್ತರದ ಮೊತ್ತ ಮೊದಲ ಉಗ್ರ, ಭಯೋತ್ಪಾದಕ ನಾಥೂರಾಂ ಗೋಡ್ಸೆ ಗಾಂಧಿಯನ್ನು ಕೊಲ್ಲುವ ಮೂಲಕ ಅಧಿಕೃತವಾಗಿ ಈ ಹೋರಾಟವನ್ನು ಉದ್ಘಾಟಿಸಿದ. ಗಾಂಧೀಜಿಯನ್ನು ಕೊಂದ ಬಳಿಕ, ಸರಕಾರ ಆ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡ ಫಲವಾಗಿ ಅವುಗಳ ಸದ್ದು ಅಡಗಿತ್ತು. ಅಂದರೆ ತೆರೆಮರೆಯಲ್ಲಿ ಕಾರ್ಯಾಚರಿಸುತ್ತಿದ್ದವು. ಆದರೆ ಇಂದಿರಾಗಾಂಧಿಯ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಪ್ರಜ್ಞಾವಂತರೆಂದು ಕರೆಸಿಕೊಂಡವರೇ, ತುರ್ತುಪರಿಸ್ಥಿತಿಯ ಹೋರಾಟದಲ್ಲಿ ಈ ವಿಷದ ಹಾವುಗಳ ಸಂಗಕ್ಕೆ ಹಪಹಪಿಸಿದರು. ಆ ಅವಕಾಶವನ್ನು ಬಳಸಿಕೊಂಡ ಆರೆಸ್ಸೆಸ್ ಮುಂದೆ ಸಾಂಸ್ಕೃತಿಕ ಸಂಘಟನೆಯ ಮುಖವಾಡ ಹಾಕಿಕೊಂಡು ತನ್ನ ವಿಚಾರವನ್ನು ಸಂವಿಧಾನಕ್ಕೆ ಪರ್ಯಾಯವಾಗಿ ದೇಶಾದ್ಯಂತ ವಿಸ್ತರಿಸಿತು. ಇಂದು ಅದು ಕಿತ್ತು ಹಾಕಲಾಗದಷ್ಟು ಆಳಕ್ಕೆ ಇಳಿದಿದೆ. ಸನಾತನ ಸಂಸ್ಥೆಯಂತಹ ಉಗ್ರವಾದಿ ಸಂಘಟನೆಗಳ ಜೊತೆಗೆ ಇತರ ಸಂಘಪರಿವಾರ ಸಂಘಟನೆಗಳು ತಮ್ಮ ಅಂತರವನ್ನು ಕಾಯ್ದುಕೊಳ್ಳಬಹುದು. ಆದರೆ, ಇವೆಲ್ಲವೂ ಒಂದೇ ವಿಷದ ಬಳ್ಳಿಯ ಹೂಗಳು ಎನ್ನುವುದನ್ನು ನಾವು ಮರೆಯಬಾರದು.

ವಿದೇಶೀ ಉಗ್ರವಾದಿ ಸಂಘಟನೆಗಳು ಉದ್ದೇಶವನ್ನು ಸನಾತನ ಸಂಸ್ಥೆಯಂತಹ ಉಗ್ರವಾದಿ ಸಂಘಟನೆಗ ಜಾರಿಗೆ ತರುತ್ತಿವೆ. ವಿದೇಶಿ ಉಗ್ರವಾದಿಗಳಿಗೂ ಈ ದೇಶದಲ್ಲಿ ಅಭದ್ರತೆ ನಿರ್ಮಾಣವಾಗಬೇಕು. ಪಾಕಿಸ್ತಾನದ ಐಎಸ್‌ಐಯ ಅಂತಿಮ ಉದ್ದೇಶವೂ ಇದೇ. ಭಾರತದಲ್ಲಿ ಅಭದ್ರತೆ ನಿರ್ಮಾಣವಾಗಿ ಅಲ್ಲಿ ದೊಂಬಿಗಳು, ಹಿಂಸಾಚಾರಗಳು ನಡೆಯಬೇಕು. ಪ್ರಜಾಸತ್ತೆ ನಾಶವಾಗಬೇಕು. ಪಾಕಿಸ್ತಾನದಂತೆ ಭಾರತವೂ ಧಾರ್ಮಿಕ ಶಕ್ತಿಗಳ ಹಿಡಿತಕ್ಕೆ ಸಿಕ್ಕಿ ಅದು ಅತಂತ್ರವಾಗಬೇಕು. ಅಲ್‌ಖಾಯಿದಾ ಆಗಿರಲಿ, ಸನಾತನ ಸಂಸ್ಥೆಯಾಗಿರಲಿ, ಒಂದೇ ನಾಣ್ಯದ ಮುಖಗಳು. ನಾವಿಂದು ವಿದೇಶಿ ಉಗ್ರರ ಕುರಿತಂತೆ ಎಷ್ಟು ಜಾಗರೂಕತೆಯನ್ನು ವಹಿಸಬೇಕಾಗಿದೆಯೋ ಅದಕ್ಕಿಂತಲೂ ದುಪ್ಪಟ್ಟು ಜಾಗರೂಕತೆಯನ್ನು ದೇಶದ ಅನ್ನ ತಿಂದು ದ್ರೋಹ ಎಸಗುತ್ತಿರುವ ಸನಾತನ ಸಂಸ್ಥೆಯಂತಹ ಸಂಘಟನೆಗಳ ಕುರಿತಂತೆ ವಹಿಸಬೇಕು. ದುರದೃಷ್ಟಕ್ಕೆ, ಹಲವು ಬಾಂಬ್ ಸ್ಫೋಟಗಳಲ್ಲಿ ಗುರುತಿಸಿಕೊಂಡಿದ್ದರೂ, ಇಂದಿಗೂ ಈ ಕೇಸರಿ ಸಂಘಟನೆಗಳು ಮುಕ್ತವಾಗಿ ದೇಶದಲ್ಲಿ ಕಾರ್ಯಾಚರಿಸುತ್ತಿವೆ.

ಭಯೋತ್ಪಾದನೆಯ ಕುರಿತಂತೆ ನಮ್ಮ ಸರಕಾರ ಹೊಂದಿರುವ ಈ ದ್ವಂದ್ವವೇ ದೇಶವನ್ನು ವಿನಾಶದ ಕಡೆಗೆ ಸಾಗಿಸುತ್ತಿದೆ. ಒಂದೆಡೆ ಬಾಂಬ್‌ಗಳನ್ನು ಸ್ಫೋಟಿಸಿ ಸಂಘಪರಿವಾರ ಉಗ್ರರು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದ್ದರೆ, ಮಗದೊಂದೆಡೆ, ಮನುವಾದಿ ಸಿದ್ಧಾಂತಗಳನ್ನು ಯುವಜನರ ತಲೆಯಲ್ಲಿ ಬಿತ್ತಿ ಅವರನ್ನು ವೈಚಾರಿಕ, ವೈಜ್ಞಾನಿಕ ದೃಷ್ಟಿಕೋನದಿಂದ ದೂರ ತಳ್ಳುತ್ತಿದ್ದಾರೆ. ವಿಚಾರವಾದಿಗಳಾದ ಪನ್ಸಾರೆ, ದಾಭೋಲ್ಕರ್, ಗೌರಿ ಲಂಕೇಶ್, ಕಲಬುರ್ಗಿ ಮೊದಲಾದವರನ್ನು ಹತ್ಯೆ ಮಾಡಿರುವ ಕೇಸರಿ ಉಗ್ರರು, ಈ ವಿಷದ ಕಾರ್ಖಾನೆಗಳಿಂದಲೇ ಹೊರಬಿದ್ದವರು. ಆರೆಸ್ಸೆಸ್ ಶಾಖೆಗಳು ಸೇರಿದಂತೆ ಸಂಘಪರಿವಾರದ ವಿವಿಧ ಸಂಸ್ಥೆಗಳು ದೇಶದ ಯುವಕರನ್ನು ಮನುವಾದದ ಕಾಲಕ್ಕೆ ಒಯ್ಯುತ್ತಿದೆ. ತಮ್ಮ ಧರ್ಮವನ್ನು ಪ್ರೀತಿಸುವ ಹೆಸರಲ್ಲಿ, ಇನ್ನೊಂದು ಧರ್ಮವನ್ನು ದ್ವೇಷಿಸುವುದನ್ನು ಕಲಿಸುತ್ತಿವೆೆ. ಈ ದೇಶಕ್ಕೆ ಸನಾತನ ಸಂಸ್ಥೆಯ ಕಚೇರಿಯಲ್ಲಿ ಸಿಕ್ಕಿದ ಬಾಂಬುಗಳಿಗಿಂತಲೂ, ಅಲ್ಲಿ ಸಿಕ್ಕಿರುವ ಮನುವಾದಿ ಸಾಹಿತ್ಯವೇ ಹೆಚ್ಚು ಅಪಾಯಕಾರಿ.

ಅದು ಈ ದೇಶದಲ್ಲಿ ಮತ್ತೆ ಮೇಲು ಕೀಳುಗಳನ್ನು ಸ್ಥಾಪಿಸುವ ಅಜೆಂಡಾ ಹೊಂದಿರುವುದು ಮಾತ್ರವಲ್ಲ, ಇತರ ಧರ್ಮೀಯರನ್ನು ದ್ವೇಷಿಸುವುದೇ ಹಿಂದೂ ಧರ್ಮವನ್ನು ಪ್ರೀತಿಸುವ ರೀತಿ ಎನ್ನುವುದನ್ನು ಕಲಿಸುತ್ತಿದೆ. ಈ ಮೂಲಕ ದೇಶವನ್ನು ವಿಚ್ಛಿದ್ರಗೊಳಿಸಲು ಸಂಚು ಹೂಡಿದೆ. ತಳಸ್ತರದ ಶೂದ್ರರು, ದಲಿತರು, ಹಿಂದುಳಿದವರ್ಗವನ್ನು ಕೊಲೆಗಾರರಾಗಿ, ಕ್ರಿಮಿನಲ್‌ಗಳಾಗಿ ಪರಿವರ್ತಿಸಿ, ಮತ್ತೆ ಈ ದೇಶದ ಚುಕ್ಕಾಣಿಯನ್ನು ಕೈಗೆತ್ತಿಕೊಳ್ಳುವುದು ಮೇಲ್ಜಾತಿಯ ಉದ್ದೇಶವಾಗಿದೆ. ಸನಾತನ ಸಂಸ್ಥೆ ಇಂದು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕರಾವಳಿ ಹೀಗೆ ಎಲ್ಲೆಡೆ ತನ್ನ ಬೇರನ್ನು ವಿಸ್ತರಿಸಿಕೊಂಡಿದೆ. ಇದೀಗ ಸನಾತನ ಸಂಸ್ಥೆಯ ಕಾರ್ಯಕರ್ತನ ಮನೆಯಲ್ಲಿ ಪತ್ತೆಯಾಗಿರುವ ಸ್ಫೋಟಕಗಳು, ನಮ್ಮ ಸರಕಾರ ಎಂತಹ ವಿಷಸರ್ಪಗಳನ್ನು ಹಾಲೂಡಿಸಿ ಸಾಕುತ್ತಿದೆ ಎನ್ನುವುದನ್ನು ಬಯಲುಗೊಳಿಸಿದೆ. ಇನ್ನಾದರೂ ಇವುಗಳನ್ನು ಬುಡಸಮೇತ ಕಿತ್ತೊಗೆಯದೇ ಇದ್ದರೆ, ದೇಶವನ್ನು ಸರ್ವ ನಾಶ ಮಾಡಲು ಪಾಕಿಸ್ತಾನ, ಚೀನಾ ಅಥವಾ ಇನ್ನಾವುದೋ ಅಲ್‌ಖಾಯಿದಾದಂತಹ ಸಂಘಟನೆಗಳ ಅಗತ್ಯವಿಲ್ಲ. ಅದನ್ನು ದೇಶದೊಳಗಿರುವ ಕೇಸರಿ ಉಗ್ರರೇ ಯಶಸ್ವಿಯಾಗಿ ಮಾಡಿ ಮುಗಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News