ಬಿಬಿಎಂಪಿ ಸದಸ್ಯೆಯ ನಕಲಿ ಜಾತಿ ಪ್ರಮಾಣಪತ್ರ ರದ್ದು

Update: 2018-08-10 18:50 GMT

ಬೆಂಗಳೂರು, ಆ.10: ಚುನಾವಣೆಯಲ್ಲಿ ನಕಲಿ ಜಾತಿ ಪ್ರಮಾಣ ಉಲ್ಲೇಖಿಸಿದ್ದ ಬಿಬಿಎಂಪಿಯ ಕೆ.ಪಿ.ಅಗ್ರಹಾರ ವಾರ್ಡ್ ಸದಸ್ಯೆ ಎಂ.ಗಾಯತ್ರಿ ಅವರ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ನಾಯಕ ಸಮುದಾಯ ಎನ್ನುವ ನಕಲಿ ಜಾತಿ ಪ್ರಮಾಣ ಪತ್ರ ಉಲ್ಲೇಖಿಸಿ ಗಾಯತ್ರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಜೊತೆಗೆ ಪ್ರಾಥಮಿಕ ಶಿಕ್ಷಣ ಸಿದ್ದಲಿಂಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವುದಾಗಿ ದಾಖಲೆ ನೀಡಿದ್ದರು. ಆದರೆ, ಈ ದಾಖಲೆ ತಿದ್ದಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು.
 ಜೊತೆಗೆ 5ನೇ ತರಗತಿ ಅನುತೀರ್ಣ ಎಂಬ ಅಂಶ ಶಾಲಾ ದಾಖಲೆಯಲ್ಲಿದ್ದರೂ, ವರ್ಗಾವಣೆ ಪತ್ರದಲ್ಲಿ 5ನೆ ತರಗತಿ ಉತ್ತೀರ್ಣ ಎಂದು ನಮೂದಾಗಿತ್ತು. ಅಷ್ಟೇ ಅಲ್ಲದೆ, ಶಾಲಾ ದಾಖಲೆಯಲ್ಲಿ ತಂದೆ ಹೆಸರು ನಾಗರಾಜ್ ಎಂದು ನಮೂದಿಸಲಾಗಿತ್ತು. ವರ್ಗಾವಣೆ ಪತ್ರದಲ್ಲಿ ಪೋಷಕರು ನಾಗರಾಜ್ ಎಂದಿತ್ತು. ಗಾಯತ್ರಿ ಅವರ ವರ್ಷಾವಾರು ಶೈಕ್ಷಣಿಕ ಪ್ರಗತಿ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂಬುದು ತಿಳಿದು ಬಂದಿದೆ.

ಇದು ಅಲ್ಲದೆ, ಗಾಯಿತ್ರಿ ಹೆಸರು ಸೇರ್ಪಡೆಗೊಳಿಸಿರುವುದಕ್ಕೆ, ಶಾಹಿ ಬದಲಾಗಿದೆ ಎಂದು ಬಿಇಓ ವರದಿ ನೀಡಿದ್ದಾರೆ. ಈ ಎಲ್ಲ ಅಂಶಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿಡಿಪಿಐ ಪರಿಶೀಲನೆ ವೇಳೆ ಬಯಲಾಗಿದೆ. ಈ ಎಲ್ಲ ವರದಿಗಳನ್ನು ಗಮನಿಸಿ, ಎಂ.ಗಾಯತ್ರಿ ಅವರ ನಾಯಕ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಲಾಗಿದೆ.

ಕೋರ್ಟ್‌ಗೆ ಹೋಗುವೆ: ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗಾಯತ್ರಿ, ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ. ನನ್ನನ್ನು ನನ್ನ ಅಜ್ಜಿ ಸಾಕಿದ್ದು, ನನ್ನ ಅಪ್ಪ-ಅಮ್ಮ ಯಾರು ಅಂತಾ ಗೊತ್ತಿಲ್ಲ. ನಾವು ನಾಯಕ ಎಂದೇ ಅಜ್ಜಿ ಶಾಲೆಯಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News