ನೊಬೆಲ್ ಪುರಸ್ಕೃತ ಸಾಹಿತಿ ನೈಪಾಲ್ ಇನ್ನಿಲ್ಲ

Update: 2018-08-12 03:40 GMT

ಲಂಡನ್, ಆ. 12: ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ.ಎಸ್.ನೈಪಾಲ್ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

"ಅದ್ಭುತ ಹಾಗೂ ಸೃಜನಶೀಲರಾಗಿ ಬದುಕಿದ್ದ ನೈಪಾಲ್ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲೇ ಕೊನೆಯುಸಿರೆಳೆದರು" ಎಂದು ಪತ್ನಿ ಲೇಡಿ ನಾದಿರಾ ನೈಪಾಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈ ಬಿಚ್ಚು ಮನಸ್ಸಿನ ಸಾಹಿತಿ ತಾವು ಸಾಧಿಸಿದ ಎಲ್ಲ ಕ್ಷೇತ್ರಗಳಲ್ಲೂ ದಿಗ್ಗಜ ಎಂದು ನಾದಿರಾ ಬಣ್ಣಿಸಿದ್ದಾರೆ. ಭಾರತೀಯ ನಾಗರಿಕ ಸೇವಾ ಅಧಿಕಾರಿಯ ಮಗನಾದ ವಿದ್ಯಾಧರ ಸೂರಜ್‌ ಪ್ರಸಾದ್ ನೈಪಾಲ್ ಹುಟ್ಟಿದ್ದು ಟ್ರಿನಿಡಾಡ್‌ನಲ್ಲಿ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸ್ಕಾಲರ್‌ಶಿಪ್ ಪಡೆದು ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮಾಡಿದ್ದರು. ಇಂಗ್ಲೆಂಡಿನಲ್ಲಿ ನೆಲೆಸಿದರೂ, ತಮ್ಮ ಬದುಕಿನ ಬಹುಭಾಗವನ್ನು ಪ್ರವಾಸದಲ್ಲೇ ಕಳೆದರು. ಬ್ರಿಟನ್‌ನ ಸಾಂಸ್ಕೃತಿಕ ವಲಯದ ಆಧಾರಸ್ತಂಭ ಎನಿಸಿದ್ದ ಅವರು, ಆಧುನಿಕ ಆಧಾರ ರಹಿತತನದ ಸಂಕೇತವಾಗಿದ್ದರು.

ನೈಪಾಲ್ ಅವರ ಆರಂಭಿಕ ಕೃತಿಗಳು ವೆಸ್ಟ್‌ಇಂಡೀಸ್ ಕೇಂದ್ರಿತವಾಗಿದ್ದವು. ಆದರೆ ಬಳಿಕ ವಿಶ್ವದ ಹಲವು ದೇಶಗಳ ವಿಷಯಗಳನ್ನೊಳಗೊಂಡ ಕೃತಿಗಳಲ್ಲಿ ಸಾಮ್ರಾಜ್ಯಶಾಹಿ ಆಡಳಿತೋತ್ತರ ಯುಗದ ಬದಲಾವಣೆಗಳ ಆಘಾತಗಳನ್ನು ತಮ್ಮ ಕೃತಿಗಳಲ್ಲಿ ಬಿಂಬಿಸಿದ್ದರು.

ಅವರ ಪ್ರಸಿದ್ಧ ಕೃತಿಗಳಲ್ಲಿ "ಎ ಹೌಸ್ ಫಾರ್ ಮಿಸ್ಟರ್ ಬಿಸ್ವಾಸ್" (1961) ಒಂದು. ಭಾರತೀಯ ವಲಸೆಗಾರರು ತಮ್ಮ ಮೂಲದ ಜತೆಗಿನ ಸಂಬಂಧ ಉಳಿಸಿಕೊಂಡು ಕೆರಿಬಿಯನ್ ದೇಶದಲ್ಲಿ ಸಮಾಜಕ್ಕೆ ಹೊಂದಿಕೊಳ್ಳಲು ಅಸಾಧ್ಯ ಎನ್ನುವುದನ್ನು ಇದರಲ್ಲಿ ಬಿಂಬಿಸಿದ್ದರು.

30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಅವರು, 1971ರಲ್ಲಿ "ಇನ್ ಎ ಫ್ರಿ ಸ್ಟೇಟ್" ಕೃತಿಗೆ ಬ್ರಿಟನ್‌ನ ಅತ್ಯುನ್ನತ ಪ್ರಶಸ್ತಿಯಾದ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು. 1996ರಲ್ಲಿ ಮೊದಲ ಪತ್ನಿ ಪ್ಯಾಟ್ ನಿಧನರಾದ ಬಳಿಕ ಪಾಕಿಸ್ತಾನಿ ಪತ್ರಕರ್ತೆ ನಾದಿರಾ ಆಲ್ವಿ ಅವರನ್ನು ವಿವಾಹವಾಗಿದ್ದರು.
ಭಾರತ ರಾಜಕೀಯದ ಭ್ರಷ್ಟಾಚಾರದಿಂದ ಹಿಡಿದು, ತಮ್ಮ ಸಾಮ್ರಾಜ್ಯ ಶಾಹಿ ದೇಶಗಳ ಬಗ್ಗೆ ಪಾಶ್ಚಿಮಾತ್ಯರು ಹೊಂದಿರುವ ಮನೋಭಾವದವರೆಗೆ ಕೃತಿ ರಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News