ಲೈಂಗಿಕ ಕಿರುಕುಳ ಪ್ರಕರಣ: ಟಿಆರ್‌ಎಸ್ ಸಂಸದನ ಪುತ್ರ ಸೆರೆ

Update: 2018-08-13 04:00 GMT

ಹೈದರಾಬಾದ್, ಆ. 13: ಕೇಂದ್ರದಲ್ಲಿ ಆಡಳಿತಾರೂಢ ಎನ್‌ಡಿಎ ಮಿತ್ರಪಕ್ಷವಾಗಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್)ಯ ರಾಜ್ಯಸಭಾ ಸದಸ್ಯ ಡಿ. ಶ್ರೀನಿವಾಸ್ ಅವರ ಪುತ್ರ ಡಿ. ಸಂಜಯ್ ಎಂಬಾತನನ್ನು ಪೊಲೀಸರು ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.

ಸಂಜಯ್ ನಡೆಸುವ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾನೆ. ನಿಝಾಮಾಬಾದ್‌ನ ಮಾಜಿ ಮೇಯರ್ ಕೂಡಾ ಆಗಿರುವ ಈತ ಆಗಸ್ಟ್ 3ರಂದು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿವಾರ ಪೊಲೀಸರ ಮುಂದೆ ಶರಣಾಗಿದ್ದಾನೆ.

ವಿಚಾರಣೆಗೆ ಗುರಿಪಡಿಸಿದ ಬಳಿಕ ಆತನನ್ನು ಅಧಿಕೃತವಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳೀಯ ನ್ಯಾಯಾಲಯ ಆರೋಪಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.

ನಿರ್ಭಯಾ ಕಾಯ್ದೆ, ಭಾರತೀಯ ದಂಡಸಂಹಿತೆಯ ಸೆಕ್ಷನ್ 354, 354ಎ ಮತ್ತು 342ರ ಅನ್ವಯ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಗಸ್ಟ್ 3ರಂದು ಕಾಲೇಜಿನ 11 ಮಂದಿ ವಿದ್ಯಾರ್ಥಿನಿಯರು ರಾಜ್ಯ ಗೃಹಸಚಿವ ನೈನಿ ನರಸಿಂಹ ರೆಡ್ಡಿ ಮತ್ತು ತೆಲಂಗಾಣ ಡಿಜಿಪಿ ಎಂ.ಮಹೇಂದ್ರ ರೆಡ್ಡಿಯವರಿಗೆ ಮನವಿ ಸಲ್ಲಿಸಿದ್ದರು. ಆ ಬಳಿಕ ಅಧಿಕೃತ ದೂರು ನೀಡಲಾಗಿತ್ತು.

ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಸಂಜಯ್, ಲೈಂಗಿಕವಾಗಿಯೂ ಕಿರುಕುಳ ನೀಡಿದ್ದಾನೆ ಎಂದು ಆಪಾದಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಅಶ್ಲೀಲ ಭಾಷೆಯಲ್ಲಿ ನಿಂದಿಸುತ್ತಿದ್ದ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ತಮ್ಮ ಆರೋಪಕ್ಕೆ ಪುರಾವೆಯಾಗಿ ಸಂಜಯ್ ಕಳುಹಿಸಿದ ಎಸ್‌ಎಂಎಸ್ ಸಂದೇಶಗಳನ್ನೂ ವಿದ್ಯಾರ್ಥಿನಿಯರು ನೀಡಿದ್ದಾರೆ.

ಆದರೆ ಈ ಆರೋಪವನ್ನು ಸಂಜಯ್ ನಿರಾಕರಿಸಿದ್ದು, ಇದು ರಾಜಕೀಯಪ್ರೇರಿತ ಹಾಗೂ ನಮ್ಮ ಕುಟುಂಬವನ್ನು ಗುರಿ ಮಾಡಿ ಮಾಡುತ್ತಿರುವ ಸುಳ್ಳು ಆರೋಪ ಎಂದಿದ್ದಾನೆ. ಪ್ರಕರಣ ದಾಖಲಾದ ತಕ್ಷಣ ಭೂಗತನಾಗಿದ್ದ ಆರೋಪಿ, ನಿರೀಕ್ಷಣಾ ಜಾಮೀನು ಪಡೆಯುವ ವಿಫಲ ಪ್ರಯತ್ನ ನಡೆಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News