ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ನಿಧನ

Update: 2018-08-13 04:52 GMT

ಕೋಲ್ಕತಾ, ಆ.13: ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಕೋಲ್ಕತಾದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

89 ವರ್ಷ ಪ್ರಾಯದ ಚಟರ್ಜಿಗೆ ರವಿವಾರ ಹೃದಯಾಘಾತವಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

 ಚಟರ್ಜಿ ಅವರು ಕಿಡ್ನಿ ಸಂಬಂಧಿತ ಸಮಸ್ಯೆಯಿಂದಲೂ ಬಳಲುತ್ತಿದ್ದರು.

  ಕಮ್ಯುನಿಸ್ಟ್ಟ್ ಪಕ್ಷದ ಹಿರಿಯ ನಾಯಕ ಚಟರ್ಜಿ 2004 ರಿಂದ 2009ರ ತನಕ ಯುಪಿಎ ಸರಕಾರದ ಅವಧಿಯಲ್ಲಿ ಲೋಕಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. 1968ರಲ್ಲಿ ಸಿಪಿಎಂಗೆ ಸೇರ್ಪಡೆಯಾಗಿದ್ದ ಅವರು 10 ಬಾರಿ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಸಿಪಿಎಂನ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು. ಸಂಸತ್ ಸದಸ್ಯರಾಗಿ ಸುದೀರ್ಘ ಸೇವೆ ಸಲ್ಲಿಸಿರುವ ಸಂಸದರ ಪೈಕಿ ಓರ್ವರಾಗಿರುವ ಚಟರ್ಜಿ 1984ರಲ್ಲಿ ಹೊರತುಪಡಿಸಿ 1971 ರಿಂದ 2009ರ ತನಕ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 1984ರಲ್ಲಿ ಜಾಧವ್‌ಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸೋತಿದ್ದರು.

1996ರಲ್ಲಿ ‘ಅತ್ಯುತ್ತಮ ಸಂಸತ್ ಸದಸ್ಯ’ ಪ್ರಶಸ್ತಿಗೆ ಭಾಜನರಾಗಿದ್ದರು.

ಯುಪಿಎ ಮೈತ್ರಿ ಸರಕಾರಕ್ಕೆ ಸಿಪಿಎಂ ತನ್ನ ಬೆಂಬಲ ಹಿಂಪಡೆದಿದ್ದರೂ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡದ ಕಾರಣ 2008ರಲ್ಲಿ ಚಟರ್ಜಿಯವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News