ಬಂಧಿತ ಹಿಂದು ಗೋವಂಶ್ ರಕ್ಷಾ ಸಮಿತಿ ಸದಸ್ಯನ ನಿವಾಸದಿಂದ 10 ಪಿಸ್ತೂಲು ವಶ

Update: 2018-08-13 10:02 GMT

ಮುಂಬೈ,ಆ.13 : ಮಹಾರಾಷ್ಟ್ರ ಉಗ್ರ ನಿಗ್ರಹ ಪಡೆ (ಎಟಿಎಸ್) ಅಧಿಕಾರಿಗಳು ರವಿವಾರ ಸುಮಾರು 10 ಪಿಸ್ತೂಲುಗಳನ್ನು ಹಿಂದು ಗೋವಂಶ್ ರಕ್ಷಾ ಸಮಿತಿ ಸದಸ್ಯ ವೈಭವ್ ರಾವತ್ ಎಂಬಾತನ ನಿವಾಸದಿಂದ ವಶಪಡಿಸಿಕೊಂಡಿದ್ದಾರೆಂದು ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ. ತೀವ್ರವಾದಿ ಹಿಂದುತ್ವ ಸಂಘಟನೆಗಳನ್ನು ಮಟ್ಟ ಹಾಕುವ ಕಾರ್ಯಾಚರಣೆಯ ಅಂಗವಾಗಿ ಎಟಿಎಸ್ ಎರಡು ದಿನಗಳ ಹಿಂದೆಯಷ್ಟೇ ಬಂಧಿಸಿದ್ದ ಮೂವರಲ್ಲಿ ವೈಭವ್ ಒಬ್ಬನಾಗಿದ್ದ.

ಬಂಧಿತ ಮೂವರು ಹಾಗೂ ಅವರ ಸಹವರ್ತಿಗಳು ಶಸ್ತ್ರಾಸ್ತ್ರ ತಯಾರಿಕಾ ಘಟಕವನ್ನು ನಡೆಸುತ್ತಿದ್ದರೇ ಅಥವಾ ಅವರು ಉತ್ತರ ಪ್ರದೇಶ, ಅಸ್ಸಾಂ ಮತ್ತಿತರ ರಾಜ್ಯಗಳಿಂದ ಅವುಗಳನ್ನು ತರಿಸಿದ್ದರೇ ಎಂದು  ಎಟಿಎಸ್ ಈಗ ತನಿಖೆ ನಡೆಸುತ್ತಿದೆ.

ಬಂಧಿತರಲ್ಲೊಬ್ಬ ನಡೆಸುತ್ತಿದ್ದ ಗ್ರಾಫಿಕ್ಸ್ ಸಂಸ್ಥೆ ಕೂಡ ಎಟಿಎಸ್ ನಿಗಾದಲ್ಲಿದೆ. ಸುಧನ್ವ ಗೊಂಢಲೇಕರ್ ಎಂಬ ಈ ಆರೋಪಿಯು ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ಪ್ರಕರಣ ಎದುರಿಸುತ್ತಿರುವ ಸಂಭಾಜಿ ಭಿಡೆ ನೇತೃತ್ವದ ಶ್ರೀ ಶಿವಪ್ರತಿಷ್ಠಾನ್ ಹಿಂದುಸ್ತಾನ್ ಇದರ ಸದಸ್ಯನಾಗಿದ್ದಾನೆ.

ಬಾಂಬ್ ತಯಾರಿಕೆಗೆ ಬೇಕಾದ ಕಚ್ಛಾ ಸಾಮಗ್ರಿಗಳನ್ನು ಹೇಗೆ ಅಸೆಂಬಲ್ ಮಾಡುವುದು ಎಂಬ ಬಗ್ಗೆ ಮಾಹಿತಿಯಿದ್ದ ಚೀಟಿಯನ್ನು ಮೂರನೇ ಆರೋಪಿ  ಶರದ್ ಕಸಲ್ಕರ್ (25) ಎಂಬಾತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆಯೆಂದು ಇಂಡಿಯನ್ ಎಕ್ಸ್‍ಪ್ರೆಸ್ ವರದಿ ತಿಳಿಸಿದೆ.

ಪುಣೆ ಮೂಲದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹಾಗೂ ಸಿಪಿಐ ನಾಯಕ ಗೋವಿಂದ ಪನ್ಸಾರೆ ಹತ್ಯೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧಿತರಾಗಿರುವ ಪನ್ವೇಲ್ ಎಂಬಲ್ಲಿನ ಇಎನ್‍ಟಿ ವೈದ್ಯ ವೀರೇಂದ್ರ ತಾವ್ಡೆ ಎಂಬಾತನ ಕುರಿತು ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡಕ್ಕೆ ಕೋಡ್ ಮಾಡಲ್ಪಟ್ಟ ಈಮೇಲ್ ಗಳು ಲಭ್ಯವಾಗಿದ್ದು ಇವುಗಳು ತಾವ್ಡೆ ಹಾಗೂ ಪೊಲೀಸರಿಗೆ ಬೇಕಾಗಿರುವ ಸನಾತನ ಸಂಸ್ಥಾ ಸದಸ್ಯ ಸಾರಂಗ್ ಅಕೋಲ್ಕರ್ ನಡುವೆ ವಿನಿಮಯವಾದ ಈಮೇಲ್ ಗಳಾಗಿದ್ದು  ಮಹಾರಾಷ್ಟ್ರದಲ್ಲಿ ಶಸ್ತ್ರಾಸ್ತ್ರ ತಯಾರಿಕಾ ಘಟಕ ರಚಿಸುವ ಅಗತ್ಯದ ಬಗ್ಗೆ ಅವುಗಳಲ್ಲಿ ಚರ್ಚಿಸಲಾಗಿತ್ತೆಂದು ಮೂಲಗಳಿಂದ ತಿಳಿದು ಬಂದಿವೆ. ತಾವ್ಡೆ ಹಿಂದು ಜನಜಾಗೃತಿ ಸಮಿತಿಯ ಸದಸ್ಯನಾಗಿದ್ದು ಆತ ಹಾಗೂ ಅಕೋಲ್ಕರ್ ನಡುವೆ 2008-2013 ನಡುವೆ ಹಲವಾರು ಈಮೇಲ್ ವಿನಿಮಯವಾಗಿದ್ದವು.  ಹಿಂದು ರಾಷ್ಟ್ರದ ಸ್ಥಾಪನೆಗಾಗಿ 15,000 ಸೇವಕರ ಸೇನೆಯನ್ನು ಸಿದ್ಧಪಡಿಸುವುದು ಸಂಘಟನೆಯ ಉದ್ದೇಶವಾಗಿತ್ತು ಎಂದು ವಿಚಾರಣೆ ವೇಲೆ ತಾವ್ಡೆ ಬಾಯ್ಬಿಟ್ಟಿದ್ದಾನೆ. ಈಮೇಲ್ ನಲ್ಲಿ ಕಾರ್ಖಾನಾ ಎಂಬ ಪದ ಬಳಕೆ ಶಸ್ತ್ರಾಸ್ತ್ರ ತಯಾರಿಕಾ ಘಟಕಕ್ಕೆ ಸಂಕೇತಾಕ್ಷರವಾಗಿದ್ದವು ಎಂದು ತನಿಖಾಧೀಕಾರಿಗಳು ತಿಳಿಸಿದ್ದಾರೆ.

ಶನಿವಾರ ಎಟಿಎಸ್ 11 ದೇಶೀಯ ಪಿಸ್ತೂಲುಗಳು ಒಂದು ಏರ್ ಗನ್, 10 ಪಿಸ್ತೂಲು ಬ್ಯಾರೆಲ್ ಗಳು, ಆರು ಪಿಸ್ತೂಲ್ ಮ್ಯಾಗಜೀನ್, ಆರು  ಭಾಗಶಃ ಪಿಸ್ತೂಲ್ ಭಾಗಗಳು,  ಮತ್ತಿತರ ಪಿಸ್ತೂಲಿನ ಬಿಡಿಭಾಗಗಳನ್ನು ವಶಪಡಿಸಿಕೊಂಡಿರುವುದು  ಬಂಧಿತರು ಅಕ್ರಮವಾಗಿ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ  ತೊಡಗಿದ್ದರು ಎಂಬುದನ್ನು ಸೂಚಿಸುತ್ತದೆ ಎಂದು ಮೂಲಗಳು ಹೇಳಿದ್ದು ವಿಚಾರಣೆ ವೇಳೆ ಆರೋಪಿಗಳು ತಮಗೇನೂ ಗೊತ್ತಿಲ್ಲ ಎಂದು ಒಬ್ಬರಿಗೊಬ್ಬರು ಬೆರಳು ತೋರಿಸಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News