ಯಾರಿಗೆ ಅದೃಷ್ಟಕರ? ಯಾರಿಗೆ ದುರದೃಷ್ಟಕರ?

Update: 2018-08-14 05:18 GMT

ಸಾಧಾರಣವಾಗಿ ದುರದೃಷ್ಟಕರ, ಸಂತಾಪ, ಖೇದ ಇತ್ಯಾದಿ ಶಬ್ದಗಳನ್ನು ಬಳಸುವುದು ಆಕಸ್ಮಿಕ ಅಪಘಾತಗಳು ಸಂಭವಿಸಿದಾಗ. ಭೂಕಂಪ ಸಂಭವಿಸಿ ನಾಶ ನಷ್ಟ ಉಂಟಾದಾಗ, ರೈಲು ಹಳಿತಪ್ಪಿ ನೂರಾರು ಮಂದಿ ಮೃತಪಟ್ಟಾಗ, ಭೀಕರ ಬಸ್ ಅವಘಡ ಸಂಭವಿಸಿದಾಗ ದೇಶದ ನಾಯಕರು ತಮ್ಮ ಸಂತಾಪವನ್ನು ಸೂಚಿಸುತ್ತಾ ‘ದುರದೃಷ್ಟಕರ’ ಎಂದು ಹೇಳುತ್ತಾರೆ. ಯಾಕೆಂದರೆ ಅಪಘಾತಗಳು ದುರದೃಷ್ಟವನ್ನು ಅವಲಂಬಿಸಿವೆ ಎಂಬ ಸಾಮಾನ್ಯ ನಂಬಿಕೆಯಿದೆ. ಆದರೆ ದೇಶದ ಪ್ರಧಾನಿಯೊಬ್ಬರು ತಮ್ಮ ಆಡಳಿತದಲ್ಲಿ ವಿಫಲವಾದಾಗ ‘ದುರದೃಷ್ಟಕರ’ ಎಂದು ಹೇಳಿ ಹೊಣೆಯಿಂದ ಜಾರಿಕೊಳ್ಳುವುದಕ್ಕಾಗುತ್ತದೆಯೇ? ಅದೃಷ್ಟಕ್ಕೆ ದೇಶಾದ್ಯಂತ ಗುಂಪು ಹಿಂಸೆಯಿಂದ ಸುಮಾರು 12ಕ್ಕೂ ಅಧಿಕ ಅಮಾಯಕರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ನರೇಂದ್ರ ಮೋದಿಯವರು ತುಟಿ ಬಿಚ್ಚಿದ್ದಾರೆ.

‘ದುರದೃಷ್ಟಕರ’ ಎಂದು ಖೇದ ವ್ಯಕ್ತಪಡಿಸಿದ್ದಾರೆ. ದುರದೃಷ್ಟ ಯಾರದು? ಪ್ರಧಾನಿಯದ್ದೋ, ದೇಶದ್ದೋ, ಅಥವಾ ಸತ್ತ ಅಮಾಯಕರದ್ದೋ? ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ. ವಿಪರ್ಯಾಸವೆಂದರೆ, ಈ ಗುಂಪು ಹಲ್ಲೆಯ ನೇತೃತ್ವ ವಹಿಸುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಹರಿಹಾಯುವ ಬದಲು, ಈ ಗುಂಪು ಹಲ್ಲೆಯ ವಿರುದ್ಧ ಜೋರು ದನಿಯಲ್ಲಿ ಮಾತನಾಡುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಗುಂಪು ಹಲ್ಲೆ ನಡೆಸುವವರ ಮನಸ್ಥಿತಿಯನ್ನು ‘ವಿಕ್ಷಿಪ್ತ’ ಎಂದು ಕರೆಯುವ ಬದಲು, ಅದನ್ನು ವಿರೋಧಿಸಿದ ವಿರೋಧಪಕ್ಷ ನಾಯಕರ ಮನಸ್ಥಿತಿಯನ್ನು ‘ವಿಕ್ಷಿಪ್ತ’ ಎಂದು ಕರೆದಿದ್ದಾರೆ. ಗುಂಪು ಹಲ್ಲೆಗಳು ದುರದೃಷ್ಟಕರ ಮತ್ತು ಅದನ್ನು ಖಂಡಿಸಿದವರು ವಿಕ್ಷಿಪ್ತ ಮನಸ್ಥಿತಿಯವರು ಎನ್ನುವುದು ಪ್ರಧಾನಿ ಮೋದಿಯವರ ಅಭಿಪ್ರಾಯ. ಗುಂಪು ಹಲ್ಲೆಗಳು ದಿನದಿನಕ್ಕೆ ಅತಿಯಾಗುವುದು ಅಥವಾ ಕಡಿಮೆಯಾಗುವುದಕ್ಕೆ ಅದೃಷ್ಟವೋ, ದುರದೃಷ್ಟವೋ ಕಾರಣವಾಗಿರುವುದಿಲ್ಲ. ಕಾನೂನು ತನ್ನ ಕರ್ತವ್ಯದಲ್ಲಿ ನಿರತವಾಗಿದ್ದಾಗ ದೊಂಬಿಗಳು, ಹಿಂಸಾಚಾರಗಳು ಸಹಜವಾಗಿಯೇ ಕಡಿಮೆಯಾಗುತ್ತವೆ. ಇದೇ ಸಂದರ್ಭದಲ್ಲಿ ಕಾನೂನು ವ್ಯವಸ್ಥೆ ದುರ್ಬಲವಾಗಿದ್ದಾಗ ಅವು ಹೆಚ್ಚಾಗುತ್ತವೆ.

ಕಾನೂನು ವ್ಯವಸ್ಥೆ ಸಬಲವಾಗುವುದು ಅಥವಾ ದುರ್ಬಲವಾಗುವುದರ ಹಿಂದೆ ಆಯಾ ಸರಕಾರಗಳ ಪ್ರಚೋದನೆಗಳು ಇರುತ್ತವೆ. ಸರಕಾರವೊಂದು ದೊಂಬಿ ಹಿಂಸಾಚಾರಗಳ ಕುರಿತಂತೆ ಎಂತಹ ನಿಲುವನ್ನು ತಳೆದಿದೆ ಎನ್ನುವುದಕ್ಕೆ ಪೂರಕವಾಗಿ ಪೊಲೀಸರೂ ಕರ್ತವ್ಯವನ್ನು ನಿಭಾಯಿಸುತ್ತಾರೆ. ಪೊಲೀಸ್ ಇಲಾಖೆಯೂ ಸರಕಾರದ ಒಂದು ಭಾಗವೇ ಆಗಿದೆ. ಪೊಲೀಸ್ ಇಲಾಖೆ ಹೆಚ್ಚಾಗಿ ಸಂವಿಧಾನಕ್ಕಿಂತ, ಸರಕಾರಕ್ಕೆ ಬದ್ಧವಾಗಿರುತ್ತದೆ. ಸರಕಾರದ ನಿಲುವುಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾ, ತನ್ನನ್ನು ತಾನು ಬಚಾವು ಮಾಡಿಕೊಳ್ಳುತ್ತದೆ. ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಈ ದೇಶದಲ್ಲಿ ಗುಂಪು ಹಲ್ಲೆಗಳು ತೀವ್ರವಾಗಿವೆ. ಉತ್ತರ ಪ್ರದೇಶದ ಒಂದು ಸರಕಾರವಂತೂ ಈ ಗುಂಪು ಹಲ್ಲೆಕೋರರಿಗೆ ‘ಗುರುತು ಪತ್ರ’ವನ್ನು ನೀಡುವ ಮೂಲಕ ಪರ್ಯಾಯ ಪೊಲೀಸ್ ಇಲಾಖೆಯನ್ನು ಅನಧಿಕೃತವಾಗಿ, ಸಂವಿಧಾನಕ್ಕೆ ವಿರುದ್ಧವಾಗಿ ಸ್ಥಾಪಿಸಲು ಹೊರಟಿದೆ. ಹೀಗಿರುವಾಗ, ಗುಂಪು ಹತ್ಯೆ ದುರದೃಷ್ಟಕರವಾಗುವುದು ಹೇಗೆ? ಗುಂಪು ಹತ್ಯೆಗಳಿಗೆ ಸಂಬಂಧ ಪಟ್ಟಂತೆ ಸರಕಾರ ಎಷ್ಟು ಕ್ರಮ ಕೈಗೊಂಡಿದೆ ಎನ್ನುವುದರ ಆಧಾರದಲ್ಲೇ ಈ ಹಲ್ಲೆಗಳು ಯಾಕೆ ಹೆಚ್ಚುತ್ತಿವೆ ಎನ್ನುವುದನ್ನು ಊಹಿಸಬಹುದು.

ಗುಂಪು ಹಲ್ಲೆಕೋರರು ಯಾರು? ಎನ್ನುವುದು ಸದ್ಯದ ಸಂದರ್ಭದಲ್ಲಿ ಊಹಿಸುವುದು ಸುಲಭ. ಶ್ರೀಸಾಮಾನ್ಯರೇ ಗುಂಪಾಗಿ, ತಕ್ಷಣದ ಆವೇಶಕ್ಕೆ ಬಲಿಯಾಗಿ ಈ ಕೃತ್ಯವನ್ನು ಎಸಗುತ್ತಿದ್ದಾರೆಯೋ? ಅಥವಾ ವ್ಯವಸ್ಥಿತವಾಗಿ ಸಂಘಟಿತವಾದ ಗುಂಪು ಈ ಹಲ್ಲೆಯನ್ನು ಯೋಜಿಸುತ್ತಿದೆಯೋ? ಈ ಪ್ರಶ್ನೆಗೆ ಉತ್ತರ ನರೇಂದ್ರ ಮೋದಿಯವರಿಗೆ ಗೊತ್ತಿಲ್ಲದ್ದೇನೂ ಅಲ್ಲ. ಗುಂಪುಹಲ್ಲೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟರೆ ಅವನ ಪರವಾಗಿ ಪೊಲೀಸ್ ಇಲಾಖೆಗೆ ಒತ್ತಡ ಹೇರುತ್ತಿರುವುದು ಯಾವ ಪಕ್ಷ? ಉಡುಪಿಯಲ್ಲಿ ಒಬ್ಬ ದನದ ವ್ಯಾಪಾರಿಯನ್ನು ದುಷ್ಕರ್ಮಿಗಳು ಪೊಲೀಸರ ಸಹಕಾರದಿಂದಲೇ ಬರ್ಬರವಾಗಿ ಕೊಂದು ಹಾಕಿ, ಹಾಡಿಯಲ್ಲಿ ಎಸೆದರು. ಬಳಿಕ ಪೊಲೀಸರೇ ಮೃತದೇಹವನ್ನು ಪತ್ತೆ ಹಚ್ಚುವ ನಾಟಕಮಾಡಿ, ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತೀರ್ಪು ನೀಡಿದರು. ಈ ಘಟನೆಯನ್ನು ತನಿಖೆಗೊಳಪಡಿಸಬೇಕು ಎಂಬ ವ್ಯಾಪಕ ಒತ್ತಡ ಬಂದ ಬಳಿಕ ತನಿಖೆ ನಡೆದು ಆರೋಪಿಗಳನ್ನು ಬಂಧಿಸಲಾಯಿತು.  ಪೊಲೀಸ್ ಅಧಿಕಾರಿಗಳೂ ಕೊಲೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂತು. ಆರೋಪಿಗಳಲ್ಲಿ ಸ್ಥಳೀಯ ಸಂಘಪರಿವಾರ ಕಾರ್ಯಕರ್ತರಿದ್ದರು. ಇವರ ಬಂಧನವಾದಾಕ್ಷಣ, ಬಿಜೆಪಿಯ ರಾಜ್ಯ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆ ಬೀದಿಗಿಳಿದರು. ಬಂಧಿಸಲ್ಪಟ್ಟ ಸಂಘಪರಿವಾರ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು ಎಂದು ಕೂಗುಮಾರಿಯಂತೆ ವೇದಿಕೆಗಳಲ್ಲಿ ಅರಚಿದರು. ಬಿಜೆಪಿಗೂ ಬಂಧನಕ್ಕೊಳಗಾದ ಗುಂಪು ಹಲ್ಲೆಕೋರರಿಗೂ ಸಂಬಂಧವಿದೆ ಎನ್ನುವುದಕ್ಕೆ ಈ ಘಟನೆ ಸಾಕಲ್ಲವೇ? ಈ ಗುಂಪು ಹಲ್ಲೆಕೋರರು ಬಿಜೆಪಿಯ ಕಾರ್ಯಕರ್ತರು ಎಂದು ಸಂಸದೆ ದೇಶಕ್ಕೆ ಘೋಷಿಸಿದಂತೆ ಆಗಲಿಲ್ಲವೇ? ಒಂದೆಡೆ ನರೇಂದ್ರ ಮೋದಿಯವರು, ಗುಂಪು ಹತ್ಯೆ ದುರದೃಷ್ಟಕರ ಎಂದು ಹೇಳುತ್ತಾರೆ ಮಗದೊಂದೆಡೆ ಅವರದೇ ಪಕ್ಷದ ಸಂಸದೆಯೊಬ್ಬರು ಬೀದಿಯಲ್ಲಿ ನಿಂತು ಗುಂಪು ಹತ್ಯೆಯಲ್ಲಿ ಭಾಗಿಯಾದ ಆರೋಪಿಗಳನ್ನು ಬಿಡುಗಡೆ ಮಾಡಿ ಎಂದು ಹೇಳುತ್ತಾರೆ.

ನಾವೀಗ ಯಾರನ್ನು ನಂಬಬೇಕು? ಇನ್ನೊಂದು ಘಟನೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ಜಾರ್ಖಂಡ್‌ನಲ್ಲಿ ಇದೇ ಗುಂಪು ಹಲ್ಲೆಕೋರರು ಗೋವ್ಯಾಪಾರಿಯೊಬ್ಬನನ್ನು ಥಳಿಸಿಕೊಂದರು. ಪೊಲೀಸರು ಅವರನ್ನು ಬಂಧಿಸಿದರು. ಇದಾದ ಕೆಲವು ದಿನಗಳ ಬಳಿಕ ಈ ಆರೋಪಿಗಳನ್ನು ನ್ಯಾಯಾಲಯ ಜಾಮೀನಿನಲ್ಲಿ ಬಿಡುಗಡೆ ಮಾಡಿತು. ವಿಪರ್ಯಾಸವೆಂದರೆ, ಕೇಂದ್ರ ಸಚಿವ ಜಯಂತ್ ಸಿನ್ಹಾ ಈ ಕೊಲೆ ಆರೋಪಿಗಳಿಗೆ ಹಾರ ಹಾಕಿ ಸನ್ಮಾನಿಸಿದರು. ಒಬ್ಬ ಕೊಲೆ ಆರೋಪಿಗೆ ಹಾರ ಹಾಕಿ ಸನ್ಮಾನ ಮಾಡಿದ್ದನ್ನು ನಾವು ದುರದೃಷ್ಟಕರ ಎಂದು ಹೇಳಿ ಸುಮ್ಮನಿರುವಂತಿಲ್ಲ. ಅವರು ಗುಂಪು ಹಲ್ಲೆಕೋರರಿಗೆ ಈ ಮೂಲಕ ಶಹಭಾಶ್‌ಗಿರಿ ನೀಡಿದ್ದಾರೆ. ಮೋದಿ ಸರಕಾರದ ಒಂದು ಪ್ರಮುಖ ಭಾಗವೇ ಆಗಿರುವ ಸಚಿವ, ಬಿಡುಗಡೆಗೊಂಡ ಕೊಲೆ ಆರೋಪಿಗಳನ್ನು ಬಹಿರಂಗವಾಗಿ ಹಾರ ಹಾಕಿ ಸನ್ಮಾನಿಸುತ್ತಾರೆ ಎಂದಾದರೆ, ಆ ಕೊಲೆಯನ್ನು ಮಾಡಿದ್ದು ಸರಕಾರವೇ ಎಂದಾಗಲಿಲ್ಲವೆ? ಸರಿ, ಸಚಿವರೊಬ್ಬರಿಂದ ಆದ ಅಚಾತುರ್ಯ ಎಂದು ಭಾವಿಸೋಣ. ಹಾಗಾದರೆ, ಈ ಸಚಿವರ ಕ್ರಮವನ್ನು ಖಂಡಿಸಿ ಪ್ರಧಾನಿ ಮೋದಿ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕಾಗಿತ್ತು. ಅದು ನಡೆಯಲೇ ಇಲ್ಲ. ಕನಿಷ್ಠ ಸಚಿವರಿಗೆ ಛೀಮಾರಿಯನ್ನಾದರೂ ಹಾಕಬೇಕಾಗಿತ್ತು. ಅದೂ ಬೇಡ, ಕನಿಷ್ಠ ‘‘ಸಚಿವರ ವರ್ತನೆ ದುರದೃಷ್ಟಕರ’ ಎಂಬ ಪದಗಳನ್ನಾದರೂ ಆಡಬಹುದಿತ್ತು.

ಆದರೆ ಮೋದಿಯವರು ಮೌನವಾಗಿದ್ದುಕೊಂಡು ಅದನ್ನು ಸಮರ್ಥಿಸಿದರು.  ಮೋದಿಯ ಈ ಮೌನವೇ ದೇಶದಲ್ಲಿ ಗುಂಪುಹತ್ಯೆಗಳು ಹೆಚ್ಚುವುದಕ್ಕೆ ಕಾರಣ. ಗುಂಪು ಹತ್ಯೆ ನಮ್ಮ ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎನ್ನುವುದನ್ನು ಹೇಳುತ್ತದೆ. ಪೊಲೀಸರೂ ಈ ಹತ್ಯೆಯಲ್ಲಿ ಶಾಮೀಲಾಗಿರುವುದು ಹಲವೆಡೆ ನಡೆದಿದೆ. ಅಂದರೆ ಪರೋಕ್ಷವಾಗಿಯಲ್ಲ, ನೇರವಾಗಿಯೇ ಈ ಗುಂಪುಹತ್ಯೆಯನ್ನು ಸರಕಾರ ಪ್ರಾಯೋಜಿಸಿದೆ. ಈ ಗುಂಪು ಹತ್ಯೆಯ ಫಲಾನುಭವಿ ಕೂಡ ಬಿಜೆಪಿಯೇ ಆಗಿರುವುದರಿಂದ ಅದರ ವಿರುದ್ಧ ಮಾತನಾಡಲಾಗದ ಸ್ಥಿತಿಯಲ್ಲಿ ನರೇಂದ್ರ ಮೋದಿಯಿದ್ದಾರೆ. ನರೇಂದ್ರ ಮೋದಿಯ ಈ ಸ್ಥಿತಿಯನ್ನು ದೇಶದ ಪಾಲಿನ ‘ದುರದೃಷ್ಟಕರ’ ಎಂದು ಧಾರಾಳವಾಗಿ ಬಣ್ಣಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News