ಐಬಿಪಿಎಸ್‌ಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಅರುಣ್ ಜೇಟ್ಲಿಗೆ ಪರಮೇಶ್ವರ್ ಪತ್ರ

Update: 2018-08-14 14:57 GMT

ಬೆಂಗಳೂರು, ಆ.14: ಇನ್ಸ್‌ಟಿಟ್ಯೂಷನ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(ಐಬಿಪಿಎಸ್)ಗೆ ತಿದ್ದು ತಂದು, ಬ್ಯಾಂಕಿಂಗ್ ನೇಮಕಾತಿ ಷರತ್ತುಗಳನ್ನು ಸಡಿಲ ಮಾಡುವಂತೆ ಕೋರಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪತ್ರ ಬರೆದಿದ್ದಾರೆ.

ಈ ಪತ್ರವನ್ನು ಬಹಳ ಬೇಸರದಿಂದ ಬರೆಯುವಂತಾಗಿದೆ. ಬ್ಯಾಂಕಿಂಗ್ ನೇಮಕಾತಿಯಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡುವಂತೆ ಮನವಿ ಮಾಡಿ ಕರ್ನಾಟಕದ ಮುಖ್ಯಮಂತ್ರಿ, ಕರ್ನಾಟಕದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸೇರಿ ಹಲವರು ಕೇಂದ್ರ ಸರಕಾರಕ್ಕೆ ನಿರಂತರವಾಗಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರ ಸರಕಾರವು ಈ ಬಗ್ಗೆ ಯಾವುದೇ ನಿಲುವು ಪ್ರಕಟಿಸುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬ್ಯಾಂಕಿಂಗ್ ನೇಮಕಾತಿಯಲ್ಲಿ ಮೊದಲು ಸ್ಥಳೀಯರಿಗೆ ಆದ್ಯತೆ ನೀಡಬೇಕು. ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಐಬಿಪಿಎಸ್‌ನಲ್ಲಿ ಅವಕಾಶ ಕಲ್ಪಿಸಿದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಇಂಗಿತ ಹೊಂದಿರುವ ಲಕ್ಷಾಂತರ ಸ್ಥಳೀಯರಿಗೆ ಮನ್ನಣೆ ನೀಡಿದಂತಾಗುತ್ತದೆ. ಈ ತಿದ್ದುಪಡಿಯಿಂದ ಕೇವಲ ರಾಜ್ಯದ ಜನರಿಗೆ ಅಷ್ಟೇ ಅಲ್ಲದೆ, ಇತರೆ ರಾಜ್ಯದವರಿಗೂ ಸಹಕಾರಿಯಾಗಲಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ. ಈಗಾಗಲೇ ಕರ್ನಾಟಕ ಸರಕಾರದಿಂದ ಹಲವು ಬಾರಿ ಕೇಂದ್ರ ಸರಕಾರಕ್ಕೆ ಪತ್ರಬರೆದು, ಐಬಿಪಿಎಸ್ ನೇಮಕಾತಿ ಷರತ್ತು ಸಡಿಲಿಸುವಂತೆ ಮನವಿ ಮಾಡಲಾಗಿದೆ. ಮತ್ತೊಂದು ಬಾರಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುತ್ತಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ಒತ್ತಾಯಿಸಿದ್ದಾರೆ.

ಸ್ಥಳೀಯ ಬ್ಯಾಂಕ್ ನೇಮಕಾತಿಯಲ್ಲೂ ಐಬಿಪಿಎಸ್ ನಿಯಮಾವಳಿ ರೀತಿಯೇ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಆದ್ಯತೆ ಸಿಗುತ್ತಿಲ್ಲ. ಹೊರ ರಾಜ್ಯದ ನೌಕರರು ಉದ್ಯೋಗ ಪಡೆದುಕೊಂಡು, ಭಾಷೆ ತಿಳಿಯದೇ ಜನರೊಂದಿಗೆ ಬ್ಯಾಂಕಿಂಗ್ ವ್ಯವಹಾರ ನಡೆಸಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಪರಮೇಶ್ವರ್ ಪತ್ರದಲ್ಲಿ ಗಮನ ಸೆಳೆದಿದ್ದಾರೆ.

ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷಿಕರೇ ಉದ್ಯೋಗ ಪಡೆದುಕೊಂಡರೆ ಅಲ್ಲಿನ ಜನರಿಗೆ ಬ್ಯಾಂಕ್‌ನಲ್ಲಿ ಸುಲಭವಾಗಿ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಗ್ರಾಮೀಣ ಭಾಗದವರು ಬ್ಯಾಂಕ್ ವ್ಯವಹಾರದಿಂದಲೇ ದೂರ ಉಳಿದು ಬಿಡುತ್ತಾರೆ ಎಂದು ಅವರು ತಿಳಿಸಿದ್ದಾರೆ. ಐಬಿಪಿಎಸ್ ವತಿಯಿಂದ ಕರೆಯುವ ಪರೀಕ್ಷೆಯನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಇದು ಪ್ರಾದೇಶಿಕ ಭಾಷೆಗೆ ಮಾಡುವ ಅಪಮಾನ. ಜೊತೆಗೆ ಸ್ಥಳೀಯರಿಗೆ ಮಾಡುವ ಮೋಸವಾಗಿದೆ. ನೇಮಕಾತಿಯಲ್ಲಿರುವ ಭಾಷಾಧೋರಣೆ ಕೇವಲ ಸ್ಥಳೀಯ ಉದ್ಯೋಗ ಅರಸುವವರಿಗಷ್ಟೇ ಅಲ್ಲದೆ, ಅಲ್ಲಿನ ಜನಸಾಮಾನ್ಯರು ಭಾಷಾ ತೊಂದರೆಗಳನ್ನು ಅನುಭವಿಸುವಂತಾಗುತ್ತಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಇರುವುದರಿಂದ ಉತ್ತರ ಭಾರತದವರೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದೆಲ್ಲೆಡೆ ಬ್ಯಾಂಕ್‌ನಲ್ಲಿ ಸುಲಭವಾಗಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಕನ್ನಡದಂತಹ ಪ್ರಾದೇಶಿಕ ಭಾಷಿಕರು ಹಿಂದಿ ಭಾಷೆಯ ಹಿಡಿತವಿಲ್ಲದೇ ಉದ್ಯೋಗ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಬಹುತೇಕರಿಗೆ ಹಿಂದಿ ಭಾಷೆ ತಿಳಿದಿಲ್ಲ. ಇಂಗ್ಲಿಷ್‌ನಲ್ಲಿಯೇ ಪರೀಕ್ಷೆ ಎದುರಿಸುವುದು ಕಷ್ಟ ಸಾಧ್ಯ. ಆಯಾ ಪ್ರಾದೇಶಿಕ ಭಾಷೆಯೇ ಇದ್ದರೆ ಸಾಕಷ್ಟು ಜನರು ತಮ್ಮ ರಾಜ್ಯದಲ್ಲೇ ಉದ್ಯೋಗ ಪಡೆದುಕೊಳ್ಳುವಲ್ಲಿ ಸಫಲರಾಗುತ್ತಾರೆ. ಬ್ಯಾಂಕ್‌ನಲ್ಲಿ ಮತ್ತೊಂದು ಭಾಷಾ ಸಮಸ್ಯೆ ಎಂದರೆ ಚಲನ್. ಖಾತೆಗೆ ಹಣ ಜಮಾ ಮಾಡುವ ಚಲನ್ ಕೂಡ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ಮುದ್ರಿತಗೊಂಡಿರುತ್ತದೆ. ಕರ್ನಾಟಕದಲ್ಲಿ ಕನ್ನಡವಷ್ಟೇ ಬಲ್ಲ ಕೋಟ್ಯಂತರ ಜನರಿದ್ದಾರೆ. ಇವರು ಬ್ಯಾಂಕ್ ವ್ಯವಹಾರ ಮಾಡಲು ಇನ್ನೊಬ್ಬರ ನೆರವನ್ನು ಪಡೆಯುವ ಪರಿಸ್ಥಿತಿಯಿದೆ ಎಂದು ಅವರು ಹೇಳಿದ್ದಾರೆ.

ಅಷ್ಟೆ ಅಲ್ಲದೆ, ಎಟಿಎಂ, ಬ್ಯಾಂಕ್ ಅಪ್ಲಿಕೇಷನ್ ಇತರೆ ಬ್ಯಾಂಕ್ ವ್ಯವಹಾರವೂ ಹಿಂದಿ, ಇಂಗ್ಲಿಷ್‌ನಲ್ಲಿಯೇ ಇದೆ. ಬ್ಯಾಂಕ್ ಉದ್ಯೋಗಿಯಿಂದ ಹಿಡಿದು ಎಲ್ಲವೂ ಇಂಗ್ಲಿಷ್, ಹಿಂದಿಯಲ್ಲೆ ಇದ್ದರೆ ಕರ್ನಾಟಕದ ಜನ ಯಾವ ಭಾಷೆಯಲ್ಲಿ ವ್ಯವಹರಿಸಬೇಕು ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.

ರಾಜ್ಯದ ಜನತೆ ಭಾಷೆಯ ಮೇಲೆ ಹೆಚ್ಚು ಅಭಿಮಾನ ಹೊಂದಿದ್ದಾರೆ. ಬ್ಯಾಂಕ್‌ನಲ್ಲಿನ ಭಾಷಾ ಧೋರಣೆ ಹಾಗೂ ಐಬಿಪಿಎಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈಗಲಾದರೂ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ. ಕೂಡಲೆ, ಐಬಿಪಿಎಸ್‌ಗೆ ತಿದ್ದುಪಡಿ ತಂದು, ನೇಮಕಾತಿ ಷರತ್ತುಗಳನ್ನು ಸಡಿಲಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಎಲ್ಲ ಸ್ಥಳೀಯ ಭಾಷೆಯಲ್ಲೆ ಪರೀಕ್ಷೆ ನಡೆಸಲು ಕೇಂದ್ರ ಸರಕಾರ ಬದಲಾವಣೆ ತರಬೇಕು. ಇದಕ್ಕೆ ಸಮಯದ ಮಿತಿಹಾಕಿಕೊಂಡು ನಿಯಮ ಸಡಿಲಿಸಬೇಕು ಎಂದು ಈ ಪತ್ರದ ಮೂಲಕ ಬಲವಾಗಿ ಒತ್ತಾಯಿಸುತ್ತೇನೆ. ಕೇಂದ್ರ ಸಚಿವರು ಈ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬ ಆಶಾಭಾವನೆಯನ್ನು ಹೊಂದಿದ್ದೇನೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News