ಅಖಂಡ ಕರ್ನಾಟಕದ ಅಸ್ಮಿತೆಗೆ ಭಂಗವುಂಟಾಗದಂತೆ ಸಮಗ್ರ ಅಭಿವೃದ್ಧಿಗೆ ಬದ್ಧ: ಕುಮಾರಸ್ವಾಮಿ

Update: 2018-08-15 09:00 GMT

ಬೆಂಗಳೂರು, ಆ.15: 72ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಸ್ವಾತಂತ್ರೋತ್ಸವದ ಸಂದೇಶ ನೀಡಿದ ಮುಖ್ಯಮಂತ್ರಿ, ಜನತೆಗೆ ಸ್ವಾತಂತ್ರ ದಿನಾಚರಣೆಯ ಶುಭಾಶಯ ಕೋರಿದರು.

‘‘ಭರತ ಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು,
ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು’’
ರಾಷ್ಟ್ರಕವಿ ಕುವೆಂಪು ಅವರ ಹಾಡನ್ನು ಉಲ್ಲೇಖಿಸಿ ಮಾತನಾಡಿದ ಅವರು, ಆಧುನಿಕ ಪ್ರಪಂಚ ಕಂಡ ಅತ್ಯಂತ ಪ್ರಭಾವಶಾಲಿ ಆಯುಧ ಅಹಿಂಸೆ. ಅಹಿಂಸಾ ಅಸ್ತ್ರದಿಂದ ಸ್ವಾತಂತ್ರವನ್ನು ಗೆದ್ದುಕೊಂಡ ವೀರ ಪರಂಪರೆಯವರು ನಾವು. ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದ ಕೆಲವೇ ದೇಶಗಳಲ್ಲಿ ಭಾರತ ಅಗ್ರಮಾನ್ಯ. ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ವಲ್ಲಭಬಾಯಿ ಪಟೇಲ್, ಗೋಪಾಲಕೃಷ್ಣ ಗೋಖಲೆ, ಲೋಕಮಾನ್ಯ ತಿಲಕ್, ನೇತಾಜಿ ಸುಭಾಶ್ ಚಂದ್ರ ಬೋಸ್, ಮೌಲಾನಾ ಅಬ್ದುಲ್ ಕಲಾಂ ಆಝಾದ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಎಲ್ಲ ಧೀರ ಸೇನಾನಿಗಳ ವಂದನೆಗಳನ್ನರ್ಪಿಸಿದರು.

ಅಖಂಡ ಕರ್ನಾಟಕದ ಅಸ್ಮಿತೆಗೆ ಕಿಂಚಿತ್ತೂ ಭಂಗ ಬಾರದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹಿಂದಿನ ಸರ್ಕಾರ ಮಂಡಿಸಿದ ಆಯವ್ಯಯ ಹಾಗೂ ಇಂದಿನ ಮೈತ್ರಿ ಸರ್ಕಾರ ಮಂಡಿಸಿದ ಆಯವ್ಯಯ ಎರಡೂ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿವೆ. ಆಯವ್ಯಯಗಳ ಎಲ್ಲಾ ಅಂಶಗಳನ್ನು ಸೂಕ್ತ ಕ್ರಮದಲ್ಲಿ ಅನುಷ್ಠಾನಕ್ಕೆ ತರಲು ನಮ್ಮ ಸರ್ಕಾರ ಕಾರ್ಯತತ್ಪರವಾಗಿದೆ ಎಂದು ಕುಮಾರಸ್ವಾಮಿ ನುಡಿದರು.

ಸ್ವತಂತ್ರ ಭಾರತ ರೂಪುಗೊಂಡದ್ದು, ಮಹಾತ್ಮಾ ಗಾಂಧೀಜಿ ಅವರ ಆಶಯಗಳ ತಳಹದಿಯ ಮೇಲೆ. ಮಹಾತ್ಮ ಗಾಂಧಿ ಅವರ 150ನೇ ಜಯಂತಿಯ ಸಂಭ್ರಮದಲ್ಲಿದ್ದೇವೆ. ಇದಕ್ಕೆ ಪೂರ್ವವೇದಿಕೆಯಾಗಿ ‘ಗಾಂಧಿ-150 ಒಂದು ರಂಗ ಪಯಣ’ ಶೀರ್ಷಿಕೆಯಲ್ಲಿ ರಾಜ್ಯಾದ್ಯಂತ 1000 ರಂಗ ಪ್ರದರ್ಶನಗಳನ್ನು ಮಾಡಲಾಗುವುದು ಹಾಗೂ ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಲಾಗುವುದು. ಅದೇರೀತಿ ಭಾರತದ ಅಸ್ತಿತ್ವವನ್ನು ವಿಶ್ವಕ್ಕೆ ಸಾರಿದ, ಭಾರತದ ಮಹತ್ವವನ್ನು ಜಗತ್ತಿನಾದ್ಯಂತ ಮೊಳಗಿಸಿದ, ಧೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ವಿಶ್ವಖ್ಯಾತ ಶಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ 125ನೇ ವರ್ಷಾಚರಣೆಯ ಹೊಸ್ತಿಲಿನಲ್ಲಿಯೂ ಇದ್ದೇವೆ. ಇದರ ಸಂಭ್ರಮವನ್ನು ರಾಜ್ಯ ಸರ್ಕಾರ ಆಚರಿಸುತ್ತಿದೆ ಎಂದರು.

ಬೆಳಗಾವಿ ನಗರಕ್ಕೂ ನನಗೂ ಅವಿನಾಭಾವ ಸಂಬಂಧ. ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಆರಂಭಿಸಿದ ಹೆಮ್ಮೆ ನನ್ನದು. ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ತೃಪ್ತಿ ನನ್ನದು. ನನ್ನ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭವಾಗಿದ್ದು ಬೆಳಗಾವಿ ಜಿಲ್ಲೆಯಲ್ಲೇ. ನನ್ನ ಅಭಿಮಾನದ ಬೆಳಗಾವಿಗೆ ರಾಜ್ಯ ಸರ್ಕಾರದ ಕೆಲವು ಇಲಾಖೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಗೋವಾ, ಕಾಸರಗೋಡು ಮತ್ತು ಸೊಲ್ಲಾಪುರ ಮುಂತಾದ ಗಡಿ ಭಾಗಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಹಿತರಕ್ಷಣೆಗೆ ನೆರೆಯ ರಾಜ್ಯ ಸರ್ಕಾರಗಳೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಲಾಗುವುದು ಎಂದರು.

ರೈತರ ಸಂಕಷ್ಟಗಳಿಗೆ ದೂರದೃಷ್ಟಿಯ ಪರಿಹಾರ ಒದಗಿಸುವುದು, ದುಡಿಯುವ ಕೈಗಳಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ನಮ್ಮ ಸರ್ಕಾರದ ಆದ್ಯತಾ ವಲಯಗಳಲ್ಲಿ ಪ್ರಮುಖವಾದವು ಎಂದ ಮುಖ್ಯಮಂತ್ರಿ, ಸಾಲ ಮನ್ನಾ ಮಾಡಬೇಕೆಂಬುದು ರೈತರ ಬಹುದಿನಗಳ ಬೇಡಿಕೆ. ಅವರ ಬೇಡಿಕೆಗೆ ಸ್ಪಂದಿಸಿರುವ ನಮ್ಮ ಸರ್ಕಾರ ಸಹಕಾರಿ, ವಾಣಿಜ್ಯ ಬ್ಯಾಂಕುಗಳಲ್ಲಿ ಸುಮಾರು 49 ಸಾವಿರ ಕೋಟಿ ರೂ. ಗಳ ಕೃಷಿ ಸಾಲ ಮನ್ನಾ ಮಾಡಲು ತೀರ್ಮಾನಿಸಿದೆ. ಭಾರತದ ಯಾವುದೇ ರಾಜ್ಯದಲ್ಲಿಯೂ ಈ ಪ್ರಮಾಣದ ರೈತರ ಸಾಲ ಮನ್ನಾ ಜಾರಿಯಾಗಿಲ್ಲ ಎಂದರು.

ಈಗಾಗಲೇ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಸಹಕಾರಿ ವಲಯದ ಸಾಲ ಮನ್ನಾ ಮಾಡಲು ಆದೇಶಿಸಲಾಗಿದೆ. 20 ಲಕ್ಷ 38 ಸಾವಿರ ರೈತರು ಇದರ ಲಾಭ ಪಡೆಯಲಿದ್ದಾರೆ. ವಾಣಿಜ್ಯ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಲು ಸಹ ಸದ್ಯದಲ್ಲೇ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದರು.

ರೈತರ ವಿಚಾರದಲ್ಲಿ ರಾಜಕೀಯ ಮಾಡುವುದು ಆರೋಗ್ಯಕರವಲ್ಲ ಎಂದು ಈ ವೇದಿಕೆಯ ಮೂಲಕ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ ಎಂದ ಕುಮಾರಸ್ವಾಮಿ, ಸಾಲ ಮನ್ನಾ ಕ್ರಮವೊಂದೇ ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ಇದು ಅವರಲ್ಲಿ ಆತ್ಮವಿಶ್ವಾಸ ತುಂಬುವ ಒಂದು ಪ್ರಯತ್ನ ಮಾತ್ರ. ಕೃಷಿ ವಲಯವನ್ನು ಸುಸ್ಥಿರಗೊಳಿಸಲು, ಲಾಭದಾಯಕವನ್ನಾಗಿಸಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ಮಂಡ್ಯ ಜಿಲ್ಲೆಯ ಸೀತಾಪುರದಲ್ಲಿ ಇತ್ತೀಚೆಗೆ ಗ್ರಾಮಸ್ಥರೊಂದಿಗೆ ಭತ್ತ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಕಳೆದ ಮೂರು ವರ್ಷಗಳಿಂದ ನೀರಿನ ಕೊರತೆಯಿಂದಾಗಿ ಕೃಷಿ ಚಟುವಟಿಕೆ ಸ್ತಬ್ಧವಾಗಿತ್ತು. ಈ ಬಾರಿ ವರುಣನ ಕೃಪೆಯಿಂದಾಗಿ ರೈತರು ಸಂಭ್ರಮದಿಂದ ಬೇಸಾಯದಲ್ಲಿ ಪಾಲ್ಗೊಂಡಿದ್ದಾರೆ. ಅವರ ಸಂಭ್ರಮದಲ್ಲಿ ನಾನು ಭಾಗಿಯಾಗಿದ್ದೆ. ರೈತರ ಸಂಭ್ರಮದೊಂದಿಗೆ ಸಂಭ್ರಮಿಸುವ ಹಾಗೂ ಅವರಿಗೆ ಆಧುನಿಕ ಕೃಷಿ ಬಗ್ಗೆ ಮಾಹಿತಿ ನೀಡಲು ತಿಂಗಳಿಗೊಮ್ಮೆ ಇಂತಹ ರೈತ ಸ್ಪಂದನ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳಲು ಉದ್ದೇಶಿಸಿದ್ದೇನೆ ಎಂದರು.

 ಪ್ರಸ್ತುತ ವರ್ಷದಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿರುವುದರಿಂದ ವಿದ್ಯುತ್ ಉತ್ಪಾದಿಸುವ ಬೃಹತ್ ಜಲಾಶಯಗಳು ಪೂರ್ಣ ಮಟ್ಟ ತಲುಪಿವೆ. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಜಲವಿದ್ಯುತ್ ಉತ್ಪಾದನೆ ಸಾಧ್ಯತೆ ಇದೆ. 370 ಮೆಗಾವ್ಯಾಟ್ ಶಕ್ತಿಯ ಯಲಹಂಕ ಅನಿಲ ವಿದ್ಯುತ್ ಸ್ಥಾವರವು ಪ್ರಸ್ತುತ ವರ್ಷದಲ್ಲಿ ಚಾಲನೆಗೊಳ್ಳಲಿದೆ. ಪ್ರಸರಣಾ ಜಾಲದ ಬಲವರ್ಧನೆಗಾಗಿ 35 ಹೊಸ ಉಪಕೇಂದ್ರಗಳು ಹಾಗೂ 800 ಕಿಲೋಮೀಟರ್‌ಗಳು ಪ್ರಸರಣಾ ಮಾರ್ಗಗಳನ್ನು ರಚಿಸಲಾಗುವುದು. ಎಲ್ಲಾ ವರ್ಗದ ಗ್ರಾಹಕರಿಗೆ ದಿನಪೂರ್ತಿ ವಿದ್ಯುತ್ ಪೂರೈಸಲು ಅಗತ್ಯವಿರುವ ವಿತರಣಾ ಜಾಲದ ಬಲವರ್ಧನೆ ಮಾಡಲಾಗುವುದು ಎಂದರು.

ಶಿಕ್ಷಣ ಮಾರಾಟದ ವಸ್ತು ಆಗಬಾರದು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿನ ಮೂಲಭೂತ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿ, ಸರ್ಕಾರಿ ಶಾಲೆಗಳಲ್ಲಿ ಹಾಜರಾತಿಯನ್ನು ಹೆಚ್ಚಿಸಲು ನಮ್ಮ ಸರ್ಕಾರ ಕಂಕಣ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದ್ದು, ಎಲ್ಲ ಸರ್ಕಾರಿ ಶಾಲೆಗಳ ಆಧುನೀಕರಣಕ್ಕೆ ಚಾಲನೆ ನೀಡಲಾಗಿದೆ. ಗ್ರಾಮೀಣ ಮಟ್ಟದಲ್ಲಿ ವಿದ್ಯಾರ್ಥಿನಿಯರಿಗೆ ಪೂರ್ಣ ಪ್ರಮಾಣದ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಉತ್ಕಟ ಆಕಾಂಕ್ಷೆ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ವಸತಿ ಕಾಲೇಜುಗಳನ್ನು ಆರಂಭಿಸಲು ಚಿಂತಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ
ಮೂರನೇ ಹಂತದಲ್ಲಿ 3,831 ಕಿ.ಮೀ. ಹೆದ್ದಾರಿ ರಸ್ತೆಗಳ ಅಭಿವೃದ್ಧಿಯನ್ನು ಪೂರ್ಣಗೊಳಿಸಲಾಗುವುದು. ನಾಲ್ಕನೇ ಹಂತದಲ್ಲಿ 2,722 ಕಿ.ಮೀ. ಹೆದ್ದಾರಿ ರಸ್ತೆಗಳನ್ನು 3,480 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಈ ವರ್ಷ ಬಿದ್ದ ಮಳೆಯಿಂದಾಗಿ ಸಂಕಗಳು ಮತ್ತು ಸಣ್ಣ ಸೇತುವೆಗಳಿಗೆ ಹಾನಿಯಾಗಿ ಸಂಭವಿಸಿರುವ ಅನಾಹುತಗಳನ್ನು ನಾನು ಗಮನಿಸಿದ್ದೇನೆ. ಸಾರ್ವಜನಿಕರ ಮತ್ತು ಶಾಲಾ ಮಕ್ಕಳ ಅನುಕೂಲಕ್ಕಾಗಿ 451 ಸಣ್ಣ ಸಂಪರ್ಕ ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಕುಮಾರಸ್ವಾಮಿ ವಿವರಿಸಿದರು.

ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಮೆಟ್ರೋ ಎರಡನೇ ಹಂತ, ಪೆರಿಫೆರಲ್ ರಿಂಗ್ ರೋಡ್, ಉಪ ನಗರ ರೈಲು ಯೋಜನೆಗಳನ್ನು ಶೀಘ್ರವಾಗಿ ಸಾಕಾರಗೊಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಬೆಂಗಳೂರಿನ ಕೆರೆಗಳ ಸಂರಕ್ಷಣೆ, ತ್ಯಾಜ್ಯವಸ್ತುಗಳ ವೈಜ್ಞಾನಿಕ ವಿಲೇವಾರಿ ಕುರಿತೂ ಸಹ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News