ನೆರೆ ನೀರಿನಲ್ಲಿ ನಿಂತು ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಹೊಡೆದಿದ್ದ ಬಾಲಕನ ಹೆಸರು ಎನ್ ‍ಆರ್ ಸಿ ಪಟ್ಟಿಯಲ್ಲಿಲ್ಲ!

Update: 2018-08-15 10:09 GMT

ಗುವಾಹಟಿ, ಆ.15: ಕಳೆದ ವರ್ಷದ ಸ್ವಾತಂತ್ರ್ಯೋತ್ಸವದಂದು ವೈರಲ್ ಆಗಿದ್ದ ಫೋಟೊವೊಂದು ಭಾರೀ ಮೆಚ್ಚುಗೆ ಗಳಿಸಿತ್ತು. ಕುತ್ತಿಗೆಯವರೆಗೆ ನೆರೆ ನೀರಿನಲ್ಲಿ ಮುಳುಗಿದ್ದ ಇಬ್ಬರು ಬಾಲಕರು ಮತ್ತು ಅವರ ಇಬ್ಬರು ಶಿಕ್ಷಕರು ಅಸ್ಸಾಂ ರಾಜ್ಯದ ಧುಬ್ರಿ ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣಗೈದು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುತ್ತಿದ್ದ ದೃಶ್ಯ ಅದಾಗಿತ್ತು.

ಆದರೆ ಆ ಚಿತ್ರದಲ್ಲಿ ಕಾಣಿಸುವ ಇಬ್ಬರು ಬಾಲಕರ ಪೈಕಿ ಒಬ್ಬನ ಹೆಸರು ಇತ್ತೀಚೆಗೆ ಹೊರಬಿದ್ದಿರುವ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಇದರ ಅಂತಿಮ ಕರಡು ಪಟ್ಟಿಯಲ್ಲಿ ಕಾಣಿಸಿಲ್ಲ. ಆ ಬಾಲಕನೇ ಹೈದರ್ ಖಾನ್. ಆ ಚಿತ್ರದಲ್ಲಿ ಕಾಣಿಸುವ ಇನ್ನೊಬ್ಬ ಬಾಲಕ ಝಿಯಾರುಲ್ ಖಾನ್, ನೀಲಿ ಶರ್ಟ್ ಧರಿಸಿರುವ ಮುಖ್ಯ ಶಿಕ್ಷಕ ತಾಝೆನ್ ಸಿಕ್ದೆರ್ ಹಾಗೂ ಸಹಾಯಕ ಶಿಕ್ಷಕ ನೃಪೆನ್ ರಭ ಅವರ ಹೆಸರುಗಳು ಎನ್‍ಆರ್‍ಸಿಯಲ್ಲಿವೆ. ಅಷ್ಟೇ ಏಕೆ ಹೈದರ್ ಖಾನ್ ತಾಯಿ ಜೊಯ್ಗುನ್ ಖತುನ್, ಆತನ 12 ವರ್ಷದ ಸೋದರ, ಆರು ವರ್ಷದ ಸೋದರಿ ಹಾಗೂ ಅಜ್ಜ ಆಲಂ ಖಾನ್ ಹೆಸರುಗಳೂ  ಇವೆ. ಆತನ ತಂದೆ ರೂಪ್ನಲ್ ಖಾನ್ 2011ರಲ್ಲಿ ಕೊಕ್ರಝರ್ ಎಂಬಲ್ಲಿ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ್ದರು.

ಈ ಸ್ವಾತಂತ್ರ್ಯ ದಿನದಂದು ಹೈದರ್ ಖಾನ್ ನನ್ನು ಮಾತನಾಡಿಸಿದಾಗ ತನಗೆ ಎನ್‍ಆರ್‍ಸಿ ಏನೆಂದೇ ಗೊತ್ತಿಲ್ಲ. ತಾನಿರುವ ಸ್ಥಳದ ತಿಳಿದವರ ಮಾರ್ಗದರ್ಶನದಂತೆ ಮುಂದುವರಿಯುವುದಾಗಿ ಹೇಳುತ್ತಾನೆ. ಕಳೆದ ಬಾರಿಯ ಸ್ವಾತಂತ್ರ್ಯ ದಿನದ ಬಗ್ಗೆ ಕೇಳಿದಾಗ ``ನೆರೆ ನೀರಿನಲ್ಲಿ ಎಲ್ಲವೂ ಮುಳುಗಿತ್ತು. ಧ್ವಜಸ್ಥಂಭವಿದ್ದ ಕಡೆಗೆ ಈಜಿಕೊಂಡು ಸಾಗಲು ಹೆಚ್ಚಿನ ಮಕ್ಕಳು ಭಯ ಪಟ್ಟಿದ್ದರು. ಆದರೆ ಝಿಯಾರುಲ್ ಮತ್ತು ನಾನು ಅಲ್ಲಿಗೆ ಈಜಿಕೊಂಡು ತೆರಳಿ ರಾಷ್ಟ್ರಧ್ವಜಕ್ಕೆ ನಮಿಸಿ ಸೆಲ್ಯೂಟ್  ಹೊಡೆದೆವು,'' ಎಂದು ಆತ ವಿವರಿಸುತ್ತಾನೆ.

ಹೈದರ್ ನ ತಾಯಿ ಆತನ ಹೆಸರನ್ನು ಎನ್‍ಆರ್‍ಸಿಯಿಂದ ಕೈಬಿಟ್ಟಿದ್ದೇಕೆಂದು ತಿಳಿಯಲು  ಸ್ಥಳೀಯ ಸೇವಾ ಕೇಂದ್ರಕ್ಕೆ  ಅರ್ಜಿ   ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News