ಕೇರಳ ಮಳೆಯಬ್ಬರಕ್ಕೆ ಒಂದೇ ದಿನ 29 ಬಲಿ

Update: 2018-08-15 18:33 GMT

ತಿರುವನಂತಪುರ,ಆ.15: ಮಳೆಯ ಅಬ್ಬರ ಬುಧವಾರವೂ ಕೇರಳದಲ್ಲಿ ಮುಂದುವರಿದಿದ್ದು,ಒಂದೇ ದಿನದಲ್ಲಿ 29 ಜನರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮಳೆ,ನೆರೆ ಮತ್ತು ಭೂಕುಸಿತಗಳಿಂದ ಸಂಭವಿಸಿರುವ ಸಾವುಗಳ ಒಟ್ಟು ಸಂಖ್ಯೆ 72ಕ್ಕೇರಿದೆ. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಬುಧವಾರ ಬೆಳಗಿನ ಜಾವ ಮಲಪ್ಪುರಂ ಜಿಲೆಯ ಪುಲಿಕ್ಕಲ್ ಬಳಿಯ ಕೈಥಕ್ಕುಂಡದಲ್ಲಿ ಮನಯೊಂದರ ಮೇಲೆ ಗುಡ್ಡ ಜರಿದು ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸಜೀವ ಸಮಾಧಿಗೊಂಡಿದ್ದಾರೆ.

ನಸುಕಿನ 1:30ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಅಝೀಝ್(42),ಅವರ ಪತ್ನಿ ಸುನೈರಾ(35) ಮತ್ತು ಮಗ ಉಬೈದ್(6) ಮೃತ ದುರ್ದೈವಿಗಳು. ಮನೆಯ ಮೇಲೆ ಬಿದ್ದ ಕೆಸರು ಮತ್ತು ಮಣ್ಣಿನ ರಾಶಿಯಿಂದಾಗಿ ಇಡೀ ಮನೆಯೇ ಕುಸಿದು ನಿದ್ರೆಯಲ್ಲಿದ್ದವರ ಮೇಲೆ ಬಿದ್ದಿದೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಹಿರಿಯ ಪುತ್ರರಾದ ಉವೈಸ್(19) ಮತ್ತು ಉನೈಸ್(17) ಗಾಯಗೊಂಡಿದ್ದು,ಅವರನ್ನು ಆಸ್ಪತ್ರೆಗೆೆ ದಾಖಲಿಸಲಾಗಿದೆ.

ಮಧ್ಯಾಹ್ನ ಮಲಪ್ಪುರಂ ಜಿಲ್ಲೆಯ ವಳಯೂರ ಬಳಿಯ ಪೆರಿಂಗಾವು ಎಂಬಲ್ಲಿ ಭೂಕುಸಿತದಿಂದ ಎಂಟು ಜನರು ಜೀವಂತ ಸಮಾಧಿಯಾಗಿದ್ದಾರೆ. ಮೃತರ ಗುರುತುಗಳು ತಕ್ಷಣಕ್ಕೆ ತಿಳಿದುಬಂದಿಲ್ಲ.

ಜಿಲ್ಲೆಯ ಇತರೆಡೆಗಳಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಇನ್ನೂ ಮೂವರು ಸಾವನ್ನಪ್ಪಿರುವುದು ವರದಿಯಾಗಿದೆ. ಇಡುಕ್ಕಿ ಜಿಲ್ಲೆಯಲ್ಲಿ 14 ಸಾವುಗಳು ಸಂಭವಿಸಿವೆೆ ಎಂದು ಮೂಲಗಳು ತಿಳಿಸಿವೆ. ತಿರುವನಂತಪುರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News