ಕೊಡಗು: ಪ್ರವಾಹ ಪೀಡಿತರ ರಕ್ಷಣೆಗೆ ಕ್ರಮ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-08-16 14:15 GMT

ಬೆಂಗಳೂರು, ಆ.16: ಮಳೆಯಿಂದ ತತ್ತರಿಸಿರುವ ಹಟ್ಟಿಹೊಳೆ ಬಳಿಯ ಗ್ರಾಮದ ಜನರನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಲೋಕೋಪಯೋಗಿ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದು, ಅಲ್ಲಿನ ಜನರನ್ನು ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ತಾವು ವಾಯುಪಡೆಯ ಅಧಿಕಾರಿಗಳೊಂದಿಗೆ, ಈ ಜಿಲ್ಲೆಗಳಲ್ಲಿ ಜನರ ರಕ್ಷಣೆಗೆ ನೆರವು ನೀಡುವ ಕುರಿತು ಮಾತುಕತೆ ನಡೆಸಿರುವುದಾಗಿ ಹೇಳಿದರು.

ಕೊಡಗಿನಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಮೊಕ್ಕಾಂ ಹೂಡಿದ್ದು, ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ ಕ್ರಮ ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಖುದ್ದು ಮಾತನಾಡಿದ್ದು, ವಸ್ತುಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದೇನೆ. ಸಾರ್ವಜನಿಕರಿಗೆ ನೆರವು ನೀಡಲು, ಅಗತ್ಯ ಬಿದ್ದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ಹಾಗೂ ಇತರ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಈ ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳು ಕೂಡಲೇ ಜಿಲ್ಲೆಗಳಿಗೆ ತೆರಳುವಂತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಈ ಜಿಲ್ಲೆಗಳಲ್ಲಿಯೇ ಮೊಕ್ಕಾಂ ಹೂಡಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News