20 ಸಾವಿರಕ್ಕೂ ಹೆಚ್ಚು ಇಂಜಿನಿಯರಿಂಗ್ ಸೀಟು ಖಾಲಿ: ಸರಕಾರಿ ಶುಲ್ಕದಡಿ ಬಿಕರಿ

Update: 2018-08-16 16:28 GMT

ಬೆಂಗಳೂರು, ಆ.16: ಸುಪ್ರೀಂಕೋರ್ಟ್ ನಿರ್ದೇಶನದಂತೆ ಇಂಜಿನಿಯರಿಂಗ್ ಪದವಿ ಕಾಲೇಜುಗಳ ಪ್ರವೇಶಕ್ಕೆ ಆ.15 ರಂದು ಕೊನೆ ದಿನವಾಗಿದ್ದರಿಂದ ಕೆಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳನ್ನು ಮಾರಾಟಕ್ಕಿಟ್ಟಂತೆ ಕಂಡುಬರುತ್ತಿದ್ದವು.

ವಿವಿಧ ಕಡೆಗಳಲ್ಲಿ ಮ್ಯಾನೇಜ್ ಮೆಂಟ್ ಕೋಟಾದಡಿಯಲ್ಲಿನ ಸೀಟುಗಳನ್ನು ಸರಕಾರಿ ಶುಲ್ಕದಲ್ಲಿ ನೀಡುತ್ತಿದ್ದ ದೃಶ್ಯಗಳು ಕಂಡು ಬಂದವು. ಸೀಟುಗಳನ್ನು ಖಾಲಿಯಿಡುವ ಬದಲಿಗೆ ಕಡಿಮೆ ಶುಲ್ಕದಲ್ಲಿ ನೀಡುವುದು ಉತ್ತಮ ಎಂದು ಕಾಲೇಜಿನ ವ್ಯವಸ್ಥಾಪಕರು ಅಭಿಪ್ರಾಯಪಟ್ಟಿದ್ದಾರೆ.

ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಆ.15 ರಂದು ಕಡೆಯ ದಿನವಾಗಿದ್ದರಿಂದ ಖಾಲಿ ಇರುವ ಸೀಟುಗಳನ್ನು ಸರಕಾರಿ ಶುಲ್ಕದಲ್ಲಿ ನೀಡಲು ನಿರ್ಧರಿಸಿದ್ದೆವು. ಮ್ಯಾನೇಜ್‌ಮೆಂಟ್ ಖೋಟಾದಲ್ಲಿ ಸೀಟು ಕೇಳಿಕೊಂಡು ಬಂದ ವಿದ್ಯಾರ್ಥಿಗಳ ಪಟ್ಟಿ ನಮ್ಮಲ್ಲಿತ್ತು. ಅಂತವರನ್ನು ವೈಯಕ್ತಿಕವಾಗಿ ಕರೆದು ಖಾಲಿ ಸೀಟುಗಳನ್ನು ಸಿಇಟಿ ಶುಲ್ಕದಡಿ ನೀಡಿದೆವು ಎಂದು ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವ್ಯವಸ್ಥಾಪಕ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ನಾವು ಸೀಟುಗಳನ್ನು ಖಾಲಿ ಉಳಿಸಿಕೊಂಡರೆ ಅದು ನಿರುಪಯೋಗವಾಗುತ್ತದೆ. ಹೀಗಾಗಿ ಅಗತ್ಯವಿರುವವರಿಗೆ ನೀಡಲು ನಿರ್ಧರಿಸಿದೆವು. ಶಿಕ್ಷಣ ಸಂಸ್ಥೆಗೆ ಇದರಿಂದ ಹಣಕಾಸು ಹೊರೆ ಬೀಳುತ್ತದೆ. ಆದರೆ, ಅವುಗಳನ್ನು ಖಾಲಿ ಬಿಡುವುದು ಇನ್ನು ಹೆಚ್ಚು ಹಣಕಾಸಿನ ಹೊರೆಯಾಗುತ್ತದೆ ಎಂದು ನಗರದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೊಬ್ಬರು ಹೇಳಿದ್ದಾರೆ.

ತಮ್ಮ ಇಷ್ಟದ ಕೋರ್ಸ್‌ನಲ್ಲಿ ಪ್ರವೇಶ ಸಿಗದ ವಿದ್ಯಾರ್ಥಿಗಳು ಸಿಕ್ಕಿದ ಕೋರ್ಸ್‌ಗೆ ಪ್ರವೇಶ ಪಡೆದಿದ್ದು ಕಂಡುಬಂತು. ಒಂದು ವರ್ಷ ಕಳೆದ ನಂತರ ವಿಶ್ವವಿದ್ಯಾಲಯ ಮಟ್ಟದಲ್ಲಿ ಕೋರ್ಸ್ ಅನ್ನು ಬದಲಿಸಬಹುದು ಎಂದು ನಾನು ಸಿಕ್ಕಿರುವ ಕೋರ್ಸ್‌ಗೆ ಪ್ರವೇಶ ಪಡೆದಿದ್ದೇನೆ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಂಕಿ ಅಂಶದ ಪ್ರಕಾರ, 20 ಸಾವಿರಕ್ಕೂ ಹೆಚ್ಚು ಸೀಟುಗಳು ಖಾಸಗಿ ಕಾಲೇಜಿನಲ್ಲಿ ಸರಕಾರಿ ಖೋಟಾದಡಿ ಖಾಲಿ ಉಳಿದಿವೆ. ಇನ್ನು ಕೆಲವು ಸರಕಾರಿ ಕಾಲೇಜಿನಲ್ಲಿವೆ. ಕಳೆದ ವರ್ಷಕ್ಕಿಂತ ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳು ಈ ವರ್ಷ ಖಾಲಿ ಉಳಿದಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News