ಆತ್ಮಹತ್ಯೆ ಯತ್ನದಲ್ಲಿ ಛಿದ್ರಗೊಂಡ ಯುವತಿಯ ಮುಖ: 31 ಗಂಟೆಗಳ ಶಸ್ತ್ರಚಿಕಿತ್ಸೆ ನಂತರ ನಡೆದದ್ದೇನು?

Update: 2018-08-17 07:09 GMT

ನ್ಯೂಯಾರ್ಕ್, ಆ.17: ಮೂರು ವರ್ಷಗಳ ಹಿಂದೆ ಆತ್ಮಹತ್ಯೆ ಯತ್ನ ನಡೆಸಿದ ಪರಿಣಾಮ ಮುಖ ವಿರೂಪಗೊಂಡಿದ್ದ ಯುವತಿ ಕೇಟೀ ಸ್ಟಬ್ಬಲ್‍ಫೀಲ್ಡ್ ಎಂಬಾಕೆ ಮುಖ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹೊಸ ಮುಖವನ್ನು ಪಡೆದಿದ್ದಾಳೆ. ಈಗ ಆಕೆಗೆ 21 ವರ್ಷ.

ಸುಮಾರು 31 ಗಂಟೆಗಳ ಅವಧಿಯ ಶಸ್ತ್ರಕ್ರಿಯೆಯನ್ನು ಆಕೆಗೆ ಕಳೆದ ವರ್ಷ ನಡೆಸಲಾಗಿತ್ತಾದರೂ ಆಕೆಯ ಕಥೆ ಈಗಷ್ಟೇ ಹೊರಜಗತ್ತಿಗೆ ತಿಳಿದು ಬಂದಿದೆ. ಅಮೆರಿಕಾದ ಇತಿಹಾಸದಲ್ಲಿಯೇ ಮುಖ ಕಸಿ ಶಸ್ತ್ರಕ್ರಿಯೆಗೊಳಗಾದ ಅತ್ಯಂತ ಕಿರಿಯ ವ್ಯಕ್ತಿ ಆಕೆಯಾಗಿದ್ದಾಳೆ.

ಮೂರು ವರ್ಷಗಳ ಹಿಂದೆ ತೀವ್ರ ಗ್ಯಾಸ್ಟ್ರೋ ಇಂಟೆಸ್ಟಿನಲ್  ಸಮಸ್ಯೆಗೊಳಗಾಗಿದ್ದ ಆಕೆ ಮಾನಸಿಕವಾಗಿ ಜರ್ಜರಿತಳಾಗಿದ್ದಳು. ಇದು ಸಾಲದೆಂಬಂತೆ  ತಾಯಿ ಉದ್ಯೋಗ ಕಳೆದುಕೊಂಡಿದ್ದರಲ್ಲದೆ ಆಕೆಯ ಬಹು ಕಾಲದ ಗೆಳೆಯನೊಂದಿಗಿನ ಸಂಬಂಧವೂ ಮುರಿದು ಬಿದ್ದಿತ್ತು. ಇದರಿಂದ ನೊಂದು ಆತ್ಮಹತ್ಯೆ ನಿರ್ಧಾರ ಕೈಗೊಂಡ ಆಕೆ ಮಾರ್ಚ್ 2014ರ ಒಂದು  ದಿನ ತನ್ನ ಸೋದರನ 308 ಕ್ಯಾಲಿಬರ್ ರೈಫಲ್ ಕೈಗೆತ್ತಿಕೊಂಡು ತನ್ನ ಕೆನ್ನೆಗೆ ಗುರಿಯಾಗಿಸಿ ಗುಂಡು ಹಾರಿಸಿದ್ದಳು. ಆಕೆಯ ಈ ಆತ್ಮಹತ್ಯಾ ಯತ್ನ ವಿಫಲವಾದರೂ ಆಕೆಯ ಮುಖವಿಡೀ ವಿರೂಪಗೊಂಡಿತ್ತು. ಅಂದಿನಿಂದ ಮುಖ ಕಸಿ ಶಸ್ತ್ರಕ್ರಿಯೆಗಾಗಿ ಆಕೆ ವೇಟಿಂಗ್ ಲಿಸ್ಟಿನಲ್ಲಿದ್ದಳು.

ಕಳೆದ ವರ್ಷ ಆಕೆಗೆ 31 ವರ್ಷದ ಅಂಗದಾನಿ ಏಡ್ರಿಯಾ ಶ್ನೀಡರ್ ಎಂಬಾಕೆಯ ಮುಖ ದೊರಕಿತ್ತು. ಓಹ್ಯೋದ ಕ್ಲೀವ್‍ಲ್ಯಾಂಡ್ ಕ್ಲಿನಿಕ್ ನ ತಜ್ಞರು  ಶ್ನೀಡರ್ ಳ ಮುಖ ಹಣೆ, ಮೂಗು, ಕೆನ್ನೆ, ದವಡೆ, ಸ್ನಾಯು, ಹಲ್ಲು ಇತ್ಯಾದಿಗಳನ್ನು ಕೇಟಿಯ ತಲೆಬುರುಡೆಗೆ ಕಸಿ ಮಾಡಿದರು. ಜಗತ್ತಿನಲ್ಲಿ ಮುಖ ಕಸಿಗೊಳಗಾದ 40ನೇ ವ್ಯಕ್ತಿ ಆಕೆಯಾಗಿದ್ದಾಳೆ.  ಈಗ ಕೇಟಿಯ ಮುಖ ಶೇ 100ರಷ್ಟು ಕಸಿ ನಡೆಸಲಾಗಿದೆ.

ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಝಿನ್ ನ ಸೆಪ್ಟೆಂಬರ್  ಸಂಚಿಕೆಯಲ್ಲಿ `ದಿ ಸ್ಟೋರಿ ಆಫ್ ಎ ಫೇಸ್'  ಮುಖಪುಟ ಲೇಖನ ಪ್ರಕಟವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News