ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲಿದೆ ‘ಬ್ಲೈಂಡ್ ಬಾಕ್ಸ್’

Update: 2018-08-17 13:03 GMT

ಗುರುತು ಬಹಿರಂಗವಾಗದಂತೆ ಕಾನೂನುಬಾಹಿರ ಚಟುವಟಿಕೆಗಳ ಮಾಹಿತಿ ನೀಡಿ

ಬೆಂಗಳೂರು, ಆ.17: ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲು ಬಯಸಿದ್ದರೂ ತಮ್ಮ ಗುರುತು ಬಹಿರಂಗಗೊಳ್ಳುತ್ತದೆ ಎಂಬ ಭಯ ಕೆಲವರಿಗಿರುತ್ತದೆ. ಈ ಸಮಸ್ಯೆಗೆ ಬೆಂಗಳೂರಿನ ವೈಟ್‍ಫೀಲ್ಡ್ ಪೊಲೀಸರು ಮಾಹಿತಿ ಪೆಟ್ಟಿಗೆ ಮೂಲಕ ಪರಿಹಾರ ಒದಗಿಸಿದ್ದಾರೆ.

‘ಮಾದಕ ವಸ್ತುಗಳಿಂದ ಸ್ವಾತಂತ್ರ್ಯ’ ಎಂಬ ವಿಶಿಷ್ಟ ಪರಿಕಲ್ಪನೆಯಡಿ ವೈಟ್‍ಫೀಲ್ಡ್ ಪೊಲೀಸರು ಈ ಬಾರಿ ಸ್ವಾತಂತ್ರ್ಯ ದಿನ ಆಚರಿಸಿದ್ದಾರೆ. ಇದಕ್ಕಾಗಿ ಜನರು ಅನಾಮಧೇಯವಾಗಿ ಮಾದಕವಸ್ತು ದಂಧೆ ಬಗ್ಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಬ್ಲೈಂಡ್ ಬಾಕ್ಸ್ ಗಳನ್ನು (ಗುಪ್ತ ಮಾಹಿತಿ ಪೆಟ್ಟಿಗೆ)  ಅಳವಡಿಸಿದ್ದಾರೆ.

ಬುಧವಾರ ಈ ಅಭಿಯಾನಕ್ಕೆ ಚಾಲನೆ ನೀಡಿದ ಡಿಸಿಪಿ ಅಬ್ದುಲ್ ಅಹದ್ ಫೋರಂ ನೇಬರ್ ಹುಡ್ ಮಾಲ್ ಬಳಿ ಮಾಹಿತಿ ಪೆಟ್ಟಿಗೆ ಇರಿಸಿದರು. ಜನರು ಅನಧಿಕೃತ ಚಟುವಟಿಕೆಗಳ ಬಗ್ಗೆ ತಮ್ಮ ಗುರುತು ಬಹಿರಂಗವಾಗದಂತೆ ಮಾಹಿತಿ ನೀಡಲು ಅನುವು ಮಾಡಿಕೊಡುವುದು ನಮ್ಮ ಯೋಜನೆಯ ಉದ್ದೇಶ ಎಂದು ಅವರು ವಿವರಿಸಿದರು.

"ತಮ್ಮ ಸುತ್ತಮುತ್ತಲು ನಡೆಯುವ ಹಲವು ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಜನರಿಗೆ ತಿಳಿದಿರುತ್ತದೆ. ಆದರೆ  ಎಲ್ಲಿ ತಮ್ಮ ಗುರುತು ಬಹಿರಂಗವಾಗುತ್ತದೆಯೋ ಎಂಬ ಭೀತಿಯಿಂದ ಪೊಲೀಸರಿಗೆ ಮಾಹಿತಿ ನೀಡಲು ಭಯಪಡುತ್ತಾರೆ. ಜನ ಫೋನ್ ಅಥವಾ ಇ-ಮೇಲ್ ಮೂಲಕ ದೂರು ನೀಡಿದರೂ ಅವರ ಹೆಸರು ಹಾಗೂ ಸಂಖ್ಯೆ ಬಹಿರಂಗವಾಗುತ್ತದೆ. ಇದಕ್ಕಾಗಿ ಮಾಹಿತಿ ಪೆಟ್ಟಿಗೆಯ ಮೂಲಕ ಅವರು ಮಾಹಿತಿ ನೀಡಿ, ಕಾನೂನುಬಾಹಿರ ಕೃತ್ಯಗಳನ್ನು ತಡೆಗಟ್ಟಲು ನೆರವಾಗಬಹುದು" ಎಂದು ಅವರು ಹೇಳಿದರು.

" ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಾದಕ ವ್ಯಸನ ಪ್ರಕರಣಗಳು ಈ ಪ್ರದೇಶದಲ್ಲಿ ವರದಿಯಾಗುತ್ತಿವೆ. ಇದು ಇಲ್ಲಿನ ಯುವಜನತೆಯ ಭವಿಷ್ಯಕ್ಕೆ ಮಾರಕ ಮಾತ್ರವಲ್ಲ ಪ್ರದೇಶದ ಕಾನೂನು ಸುವ್ಯವಸ್ಥೆಗೂ ಬೆದರಿಕೆಯಾಗಿ ಪರಿಣಮಿಸುತ್ತದೆ.  ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಅಬ್ದುಲ್ ಅಹದ್ ತಿಳಿಸಿದರು.

ಪ್ರತಿ ವಾರ ಈ ಬ್ಲೈಂಡ್ ಬಾಕ್ಸ್ ಅನ್ನು ಠಾಣೆಗೆ ತೆಗೆದುಕೊಂಡು ಹೋಗಿ ಅದರಲ್ಲಿರುವ ಮಾಹಿತಿಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಸಹಕಾರ ಹೆಚ್ಚಿಸುವ ಹಾಗು ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಪ್ರಾರಂಭಿಸಲಾಗಿದೆ. 

ವೈಟ್ ಫೀಲ್ಡ್ ಪ್ರದೇಶದ ಠಾಣೆಗಳ ಪೊಲೀಸ್ ಸಿಬ್ಬಂದಿಗಳು ಈಗಾಗಲೇ  ತಮ್ಮ ವ್ಯಾಪ್ತಿಯಲ್ಲಿರುವ ಶಾಲಾ , ಕಾಲೇಜುಗಳು, ಖಾಸಗಿ ಉದ್ಯಮಗಳು ಹಾಗು ಕಂಪೆನಿಗಳ ಮುಖ್ಯಸ್ಥರನ್ನು, ಪ್ರತಿನಿಧಿಗಳನ್ನು ಭೇಟಿಯಾಗಿ ಮಾದಕ ವ್ಯಸನಕ್ಕೆ ಸಂಬಂಧಿಸಿ ಮಾಹಿತಿ ಕಲೆಹಾಕುವ ಕೆಲಸವನ್ನೂ ಮಾಡುತ್ತಿದ್ದಾರೆ  ಎಂದು ಅಹದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News