ರಾಷ್ಟ್ರಧ್ವಜ ಅರ್ಧ ಮಟ್ಟಕ್ಕೆ ಹಾರಿಸಿ ವಾಜಪೇಯಿಗೆ ಗೌರವ ನಮನ

Update: 2018-08-17 13:05 GMT

ಬೆಂಗಳೂರು, ಆ. 17: ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಸರಕಾರಿ ಕಚೇರಿಗಳ ಮೇಲಿನ ತ್ರಿವರ್ಣ ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಲಾಯಿತು.

ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದ್ದು, ಈ ಅವಧಿಯಲ್ಲಿ ಯಾವುದೇ ಸರಕಾರಿ ಮನರಂಜನೆ ಕಾರ್ಯಕ್ರಮಗಳಿರುವುದಿಲ್ಲ. ಅಲ್ಲದೆ, ಶಾಲಾ-ಕಾಲೇಜು ಸೇರಿದಂತೆ ಸರಕಾರಿ ರಜೆ(ಆ.17)ಯನ್ನು ಘೋಷಣೆ ಮಾಡಲಾಯಿತು.

ಅಂತಿಮ ದರ್ಶನ ಪಡೆದ ಸಿಎಂ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಬೆಳಗ್ಗೆ ಹೊಸದಿಲ್ಲಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

‘ಅಜಾತ ಶತ್ರು’ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ದೇಶ ಕಂಡ ಅತ್ಯಂತ ಅಪರೂಪದ ಮೌಲಿಕ ರಾಜಕಾರಣಿಗಳಲ್ಲಿ ಒಬ್ಬರು. ‘ಸೋಲನ್ನೆಂದೂ ಒಪ್ಪಲಾರೆ, ಹೊಸ ಸವಾಲುಗಳಿಗೆಂದೂ ಹೆದರಲಾರೆ’ ಎನ್ನುವ ಅವರ ಕವನದ ಸಾಲೊಂದು ವಾಜಪೇಯಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಅವರೊಬ್ಬ ಅತ್ಯುತ್ತಮ ವಾಗ್ಮಿ ಮತ್ತು ಆದರ್ಶ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು ಎಂದು ಸಿಎಂ ಸ್ಮರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News