ವಿಮಾನ ಟೇಕಾಫ್ ವಿಳಂಬಕ್ಕೆ ಕಾರಣವಾದ ಪೈಲಟ್ ಮತ್ಸ್ಯಪ್ರೇಮ !

Update: 2018-08-18 03:38 GMT

ಕೊಲ್ಕತ್ತಾ, ಆ. 18: ಪೈಲಟ್‌ನ ಮತ್ಸ್ಯಪ್ರೇಮದಿಂದಾಗಿ ಢಾಕಾದಿಂದ ಕೊಲ್ಕತ್ತಾಗೆ ಹೊರಡಬೇಕಿದ್ದ ವಿಮಾನ ತಡವಾಗಿ ಟೇಕಾಫ್ ಆದ ಘಟನೆ ಬಗ್ಗೆ ಏರ್ ಇಂಡಿಯಾ ಆಡಳಿತ ವರ್ಗ ತನಿಖೆಗೆ ಆದೇಶಿಸಿದೆ.

ಈ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದ್ದು, ವಿಳಂಬಕ್ಕೆ ಪೈಲಟ್‌ನಿಂದ ಕಾರಣ ಕೇಳಿದೆ. ಬಾಂಗ್ಲಾದೇಶದಿಂದ ಹಿಲ್ಸಾ ಮೀನನ್ನು ವಿಮಾನದಲ್ಲಿ ಕಳ್ಳಸಾಗಾಣಿಕೆ ಮಾಡಲು ಪೈಲಟ್ ಪ್ರಯತ್ನಿಸಿದ್ದೇ ವಿಮಾನ ವಿಳಂಬಕ್ಕೆ ಕಾರಣ ಎಂದು ಹೇಳಲಾಗಿತ್ತು.

ಏರ್‌ಲೈನ್ಸ್ ಭದ್ರತಾ ಅಧಿಕಾರಿ ಮೀನು ಸಾಗಾಣಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದರೂ, ಆಗಸ್ಟ್ 8ರಂದು ವಿಮಾನ ಒಂದು ಗಂಟೆ ತಡವಾಗಿ ಟೇಕಾಫ್ ಆಗಲು ಈ ಗೊಂದಲ ಕಾರಣ ಎಂದು ಹೇಳಲಾಗಿದೆ.

ವಿಮಾನಯಾನ ಸಂಸ್ಥೆಯ ಆಂತರಿಕ ಮೂಲಗಳ ಪ್ರಕಾರ, ರಾತ್ರಿ 9.25ಕ್ಕೆ ಹೊರಡಬೇಕಿದ್ದ ಎಐ 229 ವಿಮಾನಕ್ಕೆ ಎಲ್ಲ 54 ಪ್ರಯಾಣಿಕರು 9.15ಕ್ಕೆ ಏರಿದ್ದರು. ಆದರೆ ಬಹಳಷ್ಟು ಹೊತ್ತು ಕಾದರೂ ಏರ್‌ಬಸ್ ಎ319 ಟೇಕಾಫ್ ಆಗಿರಲಿಲ್ಲ ಎನ್ನಲಾಗಿದೆ.

ಇಬ್ಬರು ಪೈಲಟ್‌ಗಳ ಪೈಕಿ ಒಬ್ಬರು, ವಿಮಾನದಲ್ಲಿ ಒಯ್ಯಲು ಬಯಸಿದ್ದ ವಸ್ತುವಿನ ಬಗ್ಗೆ ವಿಮಾನಯಾನ ಸಂಸ್ಥೆಯ ಭದ್ರತಾ ಅಧಿಕಾರಿಯ ಜತೆ ಮಾತಿನ ಚಕಮಕಿಗೆ ಇಳಿದದ್ದೇ ವಿಳಂಬಕ್ಕೆ ಕಾರಣ ಎಂದು ತಿಳಿದುಬಂದಿದೆ. ಏರ್‌ಲೈನ್ಸ್‌ನ ಗುತ್ತಿಗೆ ಸಿಬ್ಬಂದಿಯೊಬ್ಬ ಐಸ್‌ಪ್ಯಾಕ್‌ನಲ್ಲಿ ತಂದಿದ್ದ 2.5 ಕೆ.ಜಿ. ಹಿಲ್ಸಾ ಮೀನನ್ನು ಪೈಲಟ್‌ಗೆ ನೀಡಲು ಮುಂದಾಗಿದ್ದೇ ಈ ವಿವಾದಕ್ಕೆ ಕಾರಣ ಎನ್ನುವುದು ದೃಢಪಟ್ಟಿದೆ.

ಬಾಂಗ್ಲಾದೇಶದಿಂದ ಹಿಲ್ಸಾ ಮೀನು ರಫ್ತು ಮಾಡುವುದನ್ನು ನಿಷೇಧಿಸಿರುವುದರಿಂದ ಈ ಪ್ಯಾಕ್ ಒಯ್ಯಲು ಭದ್ರತಾ ಅಧಿಕಾರಿ ಅವಕಾಶ ನಿರಾಕರಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News