ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನನ್ ನಿಧನ

Update: 2018-08-18 15:10 GMT

ಬೆರ್ನ್(ಸ್ವಿಟ್ಝರ್‌ಲ್ಯಾಂಡ್), ಆ.18: ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ನೋಬಲ್ ಪುರಸ್ಕೃತ ಕೋಫಿ ಅನ್ನನ್ ಶನಿವಾರ ನಿಧನರಾಗಿರುವುದಾಗಿ ಅವರ ಕುಟುಂಬ ಹಾಗೂ ಕೋಫಿ ಅನ್ನನ್ ಪ್ರತಿಷ್ಠಾನ ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಪ್ರತಿಷ್ಠಾನ ಹೊರಡಿಸಿದ ಪ್ರಕಟನೆಯಲ್ಲಿ, ಕೋಫಿ ಅನ್ನನ್ ಅಲ್ಪಕಾಲದ ಅನಾರೋಗ್ಯದ ನಂತರ ಶನಿವಾರ ಸ್ವಿಟ್ಝರ್‌ಲ್ಯಾಂಡ್‌ನ ಬೆರ್ನ್‌ನಲ್ಲಿರುವ ಆಸ್ಪತ್ರೆಯಲ್ಲಿ ತಮ್ಮ 80ರ ಹರೆಯದಲ್ಲಿ ನಿಧನರಾಗಿರುವುದಾಗಿ ತಿಳಿಸಿದೆ.

  

ಕೋಫಿ ಅನ್ನನ್ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮೊದಲ ಕರಿಯ ಆಫ್ರಿಕ ಮೂಲದ ವ್ಯಕ್ತಿಯಾಗಿದ್ದರು. 1997ರಿಂದ 2006ರವರೆಗೆ ಎರಡು ಅವಧಿಗೆ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ ವಿಶ್ವಸಂಸ್ಥೆಯ ಸಿರಿಯದ ವಿಶೇಷ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಅನ್ನನ್ ತಮ್ಮ ಅವಧಿಯಲ್ಲಿ ಸಿರಿಯದಲ್ಲಿ ನಡೆಯುತ್ತಿದ್ದ ಸಂಘರ್ಷಗಳಿಗೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದರು. ಒಂದು ಹೆಚ್ಚು ಸಂಘಟಿತ ಮತ್ತು ಶಾಂತಿಯುತ ಜಗತ್ತಿನ ನಿರ್ಮಾಣಕ್ಕಾಗಿ ಮಾಡಿರುವ ಪ್ರಯತ್ನಕ್ಕಾಗಿ ಕೋಫಿ ಅನ್ನನ್ ಮತ್ತು ವಿಶ್ವಸಂಸ್ಥೆಗೆ 2001ರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

 ಹಲವು ರೀತಿಗಳಲ್ಲಿ ಕೋಫಿ ಅನ್ನನ್ ಅವರೇ ವಿಶ್ವಸಂಸ್ಥೆಯಾಗಿದ್ದರು. ಕೆಳಹಂತದಿಂದ ಮೇಲ್ದರ್ಜೆಗೇರಿದ ಅವರು ಸಂಘಟನೆಯನ್ನು ಅಸಮಾನ ಘನತೆ ಮತ್ತು ಬದ್ಧತೆಯೊಂದಿಗೆ ಹೊಸ ದಿಶೆಯತ್ತ ಮುನ್ನಡೆಸಿದ್ದರು ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆ್ಯಂಟೋನಿಯೊ ಗುಟೆರಸ್ ತಿಳಿಸಿದ್ದಾರೆ. ವಿಶ್ವಸಂಸ್ಥೆಯಿಂದ ನಿವೃತ್ತಿ ಹೊಂದಿದ ನಂತರವೂ ಅನ್ನನ್ ತಾವೇ ಹುಟ್ಟುಹಾಕಿದ ಕೋಫಿ ಅನ್ನನ್ ಪ್ರತಿಷ್ಠಾನ ಮತ್ತು ಆಫ್ರಿಕದ ಮಾಜಿ ಪ್ರಧಾನಿ ನೆಲ್ಸನ್ ಮಂಡೇಲಾ ಸ್ಥಾಪಿಸಿದ ಚೇರ್ ಆಫ್ ದ ಎಲ್ಡರ್ಸ್ ಸಂಸ್ಥೆಯ ಮೂಲಕ ಶಾಂತಿಗಾಗಿ ನಡೆಸುತ್ತಿದ್ದ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದರು. 1938ರಲ್ಲಿ ಘಾನಾದಲ್ಲಿ ಜನಿಸಿದ ಅನ್ನನ್ ಅವರಿಗೆ ಆಫ್ರಿಕ ಬಗ್ಗೆ ಅತೀವ ಪ್ರೀತಿಯಿತ್ತು. ಆಫ್ರಿಕದ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದ ಅವರು ಆಫ್ರಿಕ ಅಭಿವೃದ್ಧಿ ಪೀಠ ಹಾಗೂ ಆಫ್ರಿಕದಲ್ಲಿ ಹಸಿರು ಕ್ರಾಂತಿಗೆ ಮೈತ್ರಿ ಮುಂತಾದ ಅಭಿಯಾನಗಳ ಮೂಲಕ ಆಫ್ರಿಕದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದರು. ಜನರು ಕಷ್ಟ ಮತ್ತು ನೋವಿನಲ್ಲಿರುವ ಕಡೆಗೆಲ್ಲ ತೆರಳುತ್ತಿದ್ದ ಅನ್ನನ್ ಜನರ ಜೊತೆ ಅತ್ಯಂತ ಪ್ರೀತಿಯಿಂದ ವರ್ತಿಸುತ್ತಿದ್ದರು.

ಪ್ರಧಾನಿ ಮೋದಿ ಸಂತಾಪ

 ಕೋಫಿ ಅನ್ನನ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟಿಟರ್‌ನಲ್ಲಿ ಹೇಳಿಕೆ ನೀಡಿರುವ ಪ್ರಧಾನಿ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ನೋಬೆಲ್ ಪುರಸ್ಕೃತ ಕೋಫಿ ಅನ್ನನ್ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಜಗತ್ತು ಓರ್ವ ಅತ್ಯುತ್ತಮ ಆಫ್ರಿಕನ್ ಪ್ರತಿನಿಧಿ ಮತ್ತು ಮಾನವತಾವಾದಿಯನ್ನು ಮಾತ್ರವಲ್ಲ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಆತ್ಮಸಾಕ್ಷಿಯನ್ನೂ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News