ಉರ್ದು ಪತ್ರಕರ್ತನ ಮನೆಗೆ ನುಗ್ಗಿ ಕುಟುಂಬ ಸದಸ್ಯರನ್ನು ಉಗ್ರರೆಂದು ಕರೆದ ಲಕ್ನೋ ಪೊಲೀಸರು !

Update: 2018-08-18 13:22 GMT
ಮೊಹಮ್ಮದ್ ಸಾಹಿದ್ ಖಾನ್

ಲಕ್ನೋ, ಆ. 18: ಸ್ವಾತಂತ್ರ್ಯೋತ್ಸವದ ಮುನ್ನಾದಿನ ಲಕ್ನೋ ಪೊಲೀಸರು ಹಿರಿಯ ಉರ್ದು ಪತ್ರಕರ್ತ ಮೊಹಮ್ಮದ್ ಸಾಹಿದ್ ಖಾನ್ ಅವರ ನಿವಾಸಕ್ಕೆ ನುಗ್ಗಿ ಅವರನ್ನು ಹಾಗೂ ಅವರ ಇಡೀ ಕುಟುಂಬವನ್ನು ಉಗ್ರರೆಂದು ಆಪಾದಿಸಿ ಪ್ರಮಾದವೆಸಗಿದ ಘಟನೆ ನಡೆದಿದೆ.

ಪತ್ರಕರ್ತರ ಕುಟುಂಬಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ನಂತರ ಅವರಲ್ಲಿ ಕ್ಷಮೆ ಕೋರಿದ್ದಾರೆ. ಆದರೆ ಪತ್ರಕರ್ತ ಖಾನ್ ಅವರು ರಾಜ್ಯದ ಹಿರಿಯ ಅಧಿಕಾರಿಗಳಲ್ಲಿ ಈ ಘಟನೆ ಬಗ್ಗೆ ಪ್ರಸ್ತಾಪಿಸಿದ ನಂತರ ಕ್ಷಮಾಪಣೆ ಬಂದಿದೆ. ಆದರೆ ಪೊಲೀಸರು ಲಿಖಿತ ಕ್ಷಮಾಪಣೆ ಪತ್ರ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಖಾನ್ ಅವರ ನಿವಾಸವಿದ್ದ ರಸ್ತೆಯಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳು ಸಾಗಿದ್ದಾರೆಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ತಾವು ಆಗಮಿಸಿದ್ದಾಗಿ ಪೊಲೀಸರು ಅವರ ಕುಟುಂಬಕ್ಕೆ ತಿಳಿಸಿದ್ದರು. ‘‘ನನ್ನ 26 ವರ್ಷದ ವೃತ್ತಿ ಜೀವನದಲ್ಲಿ ಯಾವುದೇ ದೂರು ನನ್ನ ವಿರುದ್ಧ ದಾಖಲಾಗಿಲ್ಲ. ಇದೀಗ ಈ ಘಟನೆ ಇಡೀ ಕುಟುಂಬಕ್ಕೆ ಆಘಾತ ನೀಡಿದೆ. ನಾನು ಪತ್ರಕರ್ತನಾಗಿರದೇ ಹೋಗಿದ್ದರೆ, ಮರುದಿನವೇ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ ಲಕ್ನೋದಲ್ಲಿ ಉಗ್ರನೊಬ್ಬನನ್ನು ಬಂಧಿಸಲಾಗಿದೆ ಎಂದು ಘೋಷಿಸುತ್ತಿದ್ದರೆಂದು ಖಾನ್ ಹೇಳಿದ್ದಾರೆ.

ಖಾನ್ ಅವರು ಲಕ್ನೋ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಉರ್ದು ಭಾಷಾ ಸಂಪಾದಕರಾಗಿ ಕೆಲಸ ಮಾಡುತ್ತಿದ್ಧಾರೆ. ಪೊಲೀಸರು ತಮ್ಮ ಮನೆಗೆ ಬಂದು ‘‘ನೀವು ಉಗ್ರರ ತರಹ ಕಾಣುತ್ತಿದ್ದೀರಿ. ಇಲ್ಲಿಯೇ ಉಗ್ರರು ಅಲೆದಾಡುತ್ತಿದ್ದಾರೆ. ಇಂದು ಬೆಳಗ್ಗೆ ಇಲ್ಲಿ ಇಬ್ಬರು ಉಗ್ರರು ಬಂದಿದ್ದರು ಎಂದು ಹೇಳಿದ್ದರು’’ ಎಂದು ಖಾನ್ ವಿವರಿಸುತ್ತಾರೆ.

ತಾನೊಬ್ಬ ಪತ್ರಕರ್ತನೆಂದು ಹೇಳಿದರೂ ಅದನ್ನು ಪೊಲೀಸರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಮನೆಯಿಂದ ಹೊರನಡೆಯುವಾಗ ಕುಟುಂಬದ ಸದಸ್ಯರೆಲ್ಲರ ಫೋಟೋ ತೆಗೆದು ನಂತರ ಆಧಾರ್ ಪ್ರತಿಗಳನ್ನೂ ಕೊಂಡೊಯ್ದಿದ್ದಾರೆ ಎಂದು ಖಾನ್ ಹೇಳಿದ್ದಾರೆ.

ಈ ಘಟನೆಯ ಬಗೆ ಉನ್ನತ ತನಿಖೆ ನಡೆಸುವಂತೆ ಹಿರಿಯ ಉರ್ದು ಪತ್ರಕರ್ತ ಸಯ್ಯದ್ ಹುಸೈನ್ ಅಫ್ಸರ್ ಆಗ್ರಹಿಸಿದ್ದರೆ, ಯಾವುದೋ ತಪ್ಪು ಗ್ರಹಿಕೆಯಿಂದ ಪೊಲೀಸರು ಈ ರೀತಿ ವರ್ತಿಸಿದ್ದಾರೆಂದು ಲಕ್ನೋ ಹಿರಿಯ ಎಸ್ಪಿ ಕಲಾನಿಧಿ ನೈಥನಿ ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News