ನೋಟು ನಿಷೇಧ,ಜಿಎಸ್‌ಟಿಯಿಂದಾಗಿ ಎಂಎಸ್‌ಎಂಇಗಳಿಗೆ ಸಾಲದಲ್ಲಿ ಇಳಿಕೆ

Update: 2018-08-18 17:23 GMT

ಮುಂಬೈ,ಆ.18: ನವೆಂಬರ್, 2016ರ ನೋಟು ನಿಷೇಧ ಕ್ರಮವು ಈಗಾಗಲೇ ಕುಸಿಯುತ್ತಿರುವ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‌ಎಂಇ)ಗಳಿಗೆ ಸಾಲ ನೀಡಿಕೆ ಪ್ರಮಾಣ ಇನ್ನಷ್ಟು ಇಳಿಯಲು ಕಾರಣವಾಗಿದೆ ಮತ್ತು ಜಿಎಸ್‌ಟಿ ಜಾರಿಯು ಎಂಎಸ್‌ಎಂಇ ಕ್ಷೇತ್ರಕ್ಕೆ ಒಟ್ಟಾರೆ ಸಾಲದ ಮೇಲೆ ಯಾವುದೇ ಧನಾತ್ಮಕ ಪರಿಣಾಮವನ್ನು ಬೀರಿಲ್ಲ,ಆದರೆ ಅವುಗಳ ರಫ್ತು ಪ್ರಮಾಣ ಇಳಿಯಲು ಕಾರಣವಾಗಿದೆ ಎಂದು ಆರ್‌ಬಿಐ ಅಧ್ಯಯನವೊಂದು ಹೇಳಿದೆ.

ಆದರೂ 2017ಲ್ಲಿ ಕನಿಷ್ಠ ಮಟ್ಟವನ್ನು ತಲುಪಿದ್ದ ಎಂಎಸ್‌ಎಂಇ ಕ್ಷೇತ್ರಕ್ಕೆ ಸಾಲದ ಪ್ರಮಾಣ ಸ್ವಲ್ಪ ಚೇತರಿಸಿಕೊಂಡು 2015ರ ಮಧ್ಯಭಾಗದಲ್ಲಿದ್ದ ಮಟ್ಟವನ್ನು ತಲುಪಿದೆ ಎಂದು ಆರ್‌ಬಿಐನ ಮಿಂಟ್ ಸ್ಟ್ರೀಟ್ ಮೆಮೋ ವರದಿಯು ತಿಳಿಸಿದೆ.

ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆ(ಎನ್‌ಬಿಎಫ್‌ಸಿ)ಗಳಿಂದ ಈ ಕ್ಷೇತ್ರಕ್ಕೆ ಕಿರುಸಾಲಗಳ ಪ್ರಮಾಣವು ಇತ್ತೀಚಿನ ತ್ರೈಮಾಸಿಕಗಳಲ್ಲಿ ಏರಿಕೆಯಾಗಿದೆಯಾದರೂ ಜಿಎಸ್‌ಟಿ ಜಾರಿಗೊಂಡ ಬಳಿಕ ರಫ್ತುಗಳಿಗೆ ತೀವ್ರ ಹೊಡೆತ ಬಿದ್ದಿದೆ ಎಂದಿದೆ.

63 ಮಿಲಿಯನ್‌ಗೂ ಅಧಿಕ ಉದ್ಯಮ ಘಟಕಗಳನ್ನು ಹೊಂದಿರುವ ಮತ್ತು ಸುಮಾರು 111 ಮಿಲಿಯನ್ ಜನರಿಗೆ ಉದ್ಯೋಗಗಳನ್ನು ನೀಡಿರುವ ಎಂಎಸ್‌ಎಂಇ ಕ್ಷೇತ್ರವು ಜಿಡಿಪಿಗೆ ಸುಮಾರು ಶೇ.30ರಷ್ಟು ಕೊಡುಗೆಯನ್ನು ಸಲ್ಲಿಸುತ್ತಿದೆ. ಉತ್ಪಾದನಾ ಕ್ಷೇತ್ರದಲ್ಲಿ ಸುಮಾರು ಶೇ.45ರಷ್ಟು ಪಾಲು ಹೊಂದಿರುವ ಅದು ಒಟ್ಟು ರಫ್ತುಗಳಲ್ಲಿ ಸುಮಾರು ಶೇ.40ರಷ್ಟು ಪಾಲನ್ನು ಹೊಂದಿದೆ.

ಆದರೆ ಧನಾತ್ಮಕ ಬೆಳವಣಿಗೆಯೊಂದರಲ್ಲಿ ಸಿಡ್ಬಿ ಅಧ್ಯಯನವೊಂದು ನೋಟು ನಿಷೇಧ ಮತ್ತು ಜಿಎಸ್‌ಟಿ ಜಾರಿಯ ಬಳಿಕ ಹೆಚ್ಚಿನ ಎಂಎಸ್‌ಎಂಇಗಳಿಗೆ ಆರಂಭದಲ್ಲಿ ತುಲನಾತ್ಮಕ ಸಾಲಗಳನ್ನು ನಿರಾಕರಿಸಲಾಗಿತ್ತಾದರೂ ಮಾರ್ಚ್ 2018ರ ವೇಳೆಗೆ ಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದೆ.

ಹೆಚ್ಚಿನ ಎಂಎಸ್‌ಎಂಇಗಳು ಸಾಲ ಮೂಲ್ಯಾಂಕನವು ಪ್ರಮುಖ ಸವಾಲಾಗಿರುವ ಉದ್ಯಮಗಳಲ್ಲಿರುವುದರಿಂದ ಸಕಾಲದಲ್ಲಿ ಸಾಕಷ್ಟು ಸಾಲವನ್ನು ಪಡೆಯುವಲ್ಲಿ ಅವುಗಳ ಅಸಾಮರ್ಥ್ಯವು ಈ ಕ್ಷೇತ್ರದ ಬೆಳವಣಿಗೆಗೆ ಪ್ರಮಖ ಅಡ್ಡಿಯಾಗಿದೆ.

ಅಂತರರಾಷ್ಟ್ರೀಯ ಹಣಕಾಸು ನಿಗಮ(ಐಎಫ್‌ಸಿ)ದ ಅಂದಾಜಿನಂತೆ ಎಂಎಸ್‌ಎಂಇ ಕ್ಷೇತ್ರದ ಸಾಲದ ಬೇಡಿಕೆ 379 ಶತಕೋಟಿ ಡಾಲರ್‌ಗಳಷ್ಟಿದ್ದು,ಹಾಲಿ ಅವುಗಳಿಗೆ 139 ಬಿ.ಡಾ.ಸಾಲವನ್ನು ನಿಡಲಾಗಿದೆ. 230 ಬಿ.ಡಾ.ಗಳ ಕೊರತೆಯಿದೆ ಮತ್ತು ಇದು ಜಿಡಿಪಿಯ ಶೇ.11ರಷ್ಟಿದೆ.

 ಎಂಎಸ್‌ಎಂಇ ಕ್ಷೇತ್ರಕ್ಕೆ ಬ್ಯಾಂಕ್ ಸಾಲಗಳ ವಾರ್ಷಿಕ ಬೆಳವಣಿಗೆಯ ಪ್ರಮಾಣ 2015ರಲ್ಲಿ ಕ್ರಮೇಣ ಇಳಿಕೆಯಾಗುತ್ತ 2016 ಅಕ್ಟೋಬರ್‌ನಲ್ಲಿ ಚೇತರಿಕೆ ಕಾಣುವ ಮುನ್ನ 2016ರಲ್ಲಿ ಶೇ.1.6ರಷ್ಟು ಇಳಿಕೆಯಾಗಿತ್ತು. 2014-16ರಲ್ಲಿ ವಾರ್ಷಿಕ ಬೆಳವಣಿಗೆಯ ಪ್ರಮಾಣದಲ್ಲಿ ಇಳಿಕೆಗೆ ಒಟ್ಟಾರೆ ಆರ್ಥಿಕ ಹಿಂಜರಿತ,ಹೆಚ್ಚುತ್ತಿದ್ದ ಅನುತ್ಪಾದಕ ಆಸ್ತಿಗಳು ಮತ್ತು ಎಂಎಸ್‌ಎಂಇ ವರ್ಗದಿಂದ ಕೃಷಿಕ್ಷೇತ್ರಕ್ಕೆ ಆಹಾರ ಮತ್ತು ಕೃಷಿ ಉತ್ಪನ್ನ ಸಂಸ್ಕರಣ ಘಟಕಗಳ ಮರು ವರ್ಗೀಕರಣ ಭಾಗಶಃ ಕಾರಣಗಳಾಗಿದ್ದವು ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News