ಜೈನ ಸಮುದಾಯ ಸಂಸ್ಕಾರದಿಂದ ದೂರವಾಗುತ್ತಿದ್ದಾರೆ: ಸುರೇಂದ್ರಕುಮಾರ್

Update: 2018-08-19 19:24 GMT

ಬೆಂಗಳೂರು, ಆ.19: ಜೈನ ಸಮುದಾಯದವರಿಂದು ಸಂಸ್ಕಾರದಿಂದ ದೂರ ಸರಿಯುತ್ತಿದ್ದಾರೆ ಎಂದು ಭಾರತೀಯ ಜೈನ ಮಿಲನ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸುರೇಂದ್ರಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಖಿಲ್ ನಿಶ್ಚಲ್ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಪಿ.ಜಯಲಕ್ಷ್ಮಿ ಅಭಯಕುಮಾರ್‌ರ ವಿರಚಿತ ನಾಟಕ ಪುಣ್ಯವನಿತೆ ಮೈನಾಸುಂದರಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಸ್ಕಾರವನ್ನು ಮರೆಯುತ್ತಿರುವ ಸಮುದಾಯದವರು ಅದನ್ನು ಹೇಗೆ ಕಾಪಾಡಿಕೊಳ್ಳಬೇಕು ಹಾಗೂ ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ದಿನದಿಂದ ದಿನಕ್ಕೆ ತಮ್ಮತನವನ್ನು ತಾವು ಸಂಪೂರ್ಣ ಮರೆಯುತ್ತಿದ್ದೇವೆ ಎಂದ ಅವರು, ನಾವು ಸಂಸ್ಕಾರವನ್ನು ರೂಢಿಸಿಕೊಳ್ಳಲಿಲ್ಲ ಎಂದರೆ ಕಷ್ಟವಾಗುತ್ತದೆ. ನಮ್ಮ ಸಮುದಾಯ ಹಿಂದಿನ ಸಂಸ್ಕೃತಿಯನ್ನು ಉಳಿಸಲು ಹಾಗೂ ಬೆಳೆಸಲು ಮುಂದಾಗಬೇಕು ಎಂದು ಅವರು ಹೇಳಿದರು.
ಜೈನರು ಬುದ್ಧನ ಬಗ್ಗೆ ನೆನೆಯಬೇಕು. ಅವರ ಹಾದಿಯನ್ನು ಅನುಸರಿಸಬೇಕು. ನಮ್ಮ ಸಮುದಾಯದ ಹಿರಿಯ ಚೇತನಗಳನ್ನು ಕೇವಲ ನೆನೆಯುವುದು, ಅವರನ್ನು ಅನುಸರಿಸುವುದರ ಜತೆಗೆ, ನಾಟಕಗಳ ಮೂಲಕ ತಮ್ಮ ತತ್ವಗಳನ್ನು ಜನತೆಗೆ ಸಾರಬೇಕು. ಅದು ಇತರರಿಗೆ ಅಗತ್ಯ ನೆರವು ನೀಡುತ್ತದೆ ಎಂದರು.

ಜೈನ ಸಮುದಾಯದಲ್ಲೂ ಉತ್ತಮ ಬರಹಗಾರರಿದ್ದಾರೆ. ಅಂತಹವರಿಗೆ ಹೆಚ್ಚಿನ ನೆರವು ಮೂಲಕ ಮತ್ತಷ್ಟು ಜನ ಬರಹಗಾರರನ್ನು ತಯಾರು ಮಾಡುವ ಪ್ರಯತ್ನ ಮಾಡಬೇಕು. ಜೈನ ಸಮುದಾಯದ ಹಿರಿಯ ತಲೆಮಾರಿನ ಸಾಧಕರ ಸಾಧನೆಗಳನ್ನು ನಾಟಕ, ಪುಸ್ತಕಗಳ ಮೂಲಕ ನಮ್ಮ ಪೀಳಿಗೆಗೆ ತೋರಿಸಿಕೊಡಬೇಕು. ಅಂತಹ ಕೆಲಸಗಳು ಹೆಚ್ಚೆಚ್ಚು ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತ್ಯಾಗಿ ಸೇವಾ ಸಮಿತಿಯ ಕಾರ್ಯಾಧ್ಯಕ್ಷೆ ಅನಿತಾ ಸುರೇಂದ್ರಕುಮಾರ್, ವಿಮರ್ಶಕಿ ಡಾ.ವಿಜಯಾ ಸುಬ್ಬರಾಜ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ವೆಂಕಟರಾಜು ಸೇರಿದಂತೆ ಕರ್ನಾಟಕ ಜೈನ್ ಅಸೋಸಿಯೇಷನ್‌ನ ಕಾರ್ಯಕಾರಿ ಸದಸ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News