ಉನ್ನತ ಶಿಕ್ಷಣ ಆಯೋಗ ರಚನೆಯಾದರೆ ಶಿಕ್ಷಣದಲ್ಲಿ ಶ್ರೇಣೀಕೃತ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ: ಡಾ.ಜಿ.ರಾಮಕೃಷ್ಣ

Update: 2018-08-19 19:30 GMT

ಬೆಂಗಳೂರು, ಆ.19: ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು(ಯುಜಿಸಿ) ಬದಲಿಸಿ ಉನ್ನತ ಶಿಕ್ಷಣ ಆಯೋಗ ರಚನೆ ಮಾಡುವ ಕೇಂದ್ರ ಸರಕಾರದ ಯೋಚನೆಯು ಶಿಕ್ಷಣದಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂದು ಶಿಕ್ಷಣ ತಜ್ಞ ಡಾ. ಜಿ.ರಾಮಕೃಷ್ಣ ಆತಂಕ ವ್ಯಕ್ತಪಡಿಸಿದರು.
ರವಿವಾರ ಕರ್ನಾಟಕ ವಿದ್ಯಾರ್ಥಿ ಸಂಘಟನೆ(ಕೆವಿಎಸ್) ನಗರದ ಜೈಭಿಮ್ ಭವನದಲ್ಲಿ ಹಮ್ದಮಿಕೊಂಡಿದ್ದ ಸದೃಢ ದೇಶ ನಿರ್ಮಾಣಕ್ಕಾಗಿ ಗುಣಮಟ್ಟದ ಉನ್ನತ ಶಿಕ್ಷಣ ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಶಿಕ್ಷಣ ವ್ಯವಸ್ಥೆ ಸುಧಾರಿಸುವ ಬದಲಿಗೆ ಇನ್ನಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದೆ ಎಂದು ವಿಷಾದಿಸಿದರು.

ಕೇಂದ್ರ ಸರಕಾರ ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರೀಕರಣ ಮಾಡಲು ಹೊರಟಿದೆ. ಇದರ ಭಾಗವಾಗಿ ಉನ್ನತ ಶಿಕ್ಷಣ ಆಯೋಗದಲ್ಲಿ ಶಿಕ್ಷಣ ತಜ್ಞರ ಬದಲಿಗೆ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉನ್ನತ ಅಧಿಕಾರಿಗಳನ್ನು ಸೇರಿಸಲು ಚಿಂತನೆ ನಡೆಸಿದೆ. ಈ ಖಾಸಗಿ ಅಧಿಕಾರಿಗಳು ಶಿಕ್ಷಣದ ನೀತಿಗಳನ್ನು ವ್ಯಾಪಾರಕ್ಕೆ ಪೂರಕವಾಗಿ ಬದಲಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸ್ವಾತಂತ್ರ ಪೂರ್ವದಲ್ಲಿ ಶಿಕ್ಷಣವನ್ನು ಪ್ರತಿಷ್ಟಿತ ವರ್ಗದ ಮಕ್ಕಳು ಮಾತ್ರ ಕಲಿಯುತ್ತಿದ್ದರು. ಪ್ರಜಾಪ್ರಭುತ್ವ ಭಾರತದಲ್ಲಿ ಎಲ್ಲ ವರ್ಗದ ಮಕ್ಕಳು ಶಾಲೆ, ಕಾಲೇಜುಗಳತ್ತ ಮುಖ ಮಾಡಿದರು. ಪ್ರಾರಂಭದಲ್ಲಿ ಸರಕಾರಿ ಶಾಲಾ-ಕಾಲೇಜುಗಳು ಮಾತ್ರ ಇದ್ದವು. ಆದರೆ, ತಳ ವರ್ಗಗಳ ಮಕ್ಕಳು ಶಾಲೆಗಳತ್ತ ಬರಲು ಪ್ರಾರಂಭಿಸುತ್ತಿದ್ದಂತೆ ಉನ್ನತ ವರ್ಗದವರು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಪ್ರಾರಂಭಿಸಿ, ಸರಕಾರಿ ಶಾಲೆಗಳಿಂದ ತಮ್ಮ ಮಕ್ಕಳನ್ನು ಪ್ರತ್ಯೆೀಕಿಸಿದವು ಎಂದು ಅವರು ಹೇಳಿದರು.

ಶಿಕ್ಷಣ ಕ್ಷೇತ್ರದ ಎಲ್ಲ ರೀತಿಯ ನೀತಿ ನಿಯಮಗಳ ರಚನೆಯ ಅಧಿಕಾರವನ್ನು ಐಎಎಸ್ ಅಧಿಕಾರಗಳಿಗೆ ನೀಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಅನುಭವಿಗಳನ್ನು, ತಜ್ಞರನ್ನು ಹಾಗೂ ವಿದ್ಯಾರ್ಥಿ ಸಂಘಟನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಇದರ ವಿರುದ್ಧ ಎಲ್ಲ ಸಮುದಾಯಗಳು ಒಂದಾಗಿ ಹೋರಾಟ ರೂಪಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.

ಜನಪರ ವೇದಿಕೆಯ ಮಲ್ಲಿಗೆ ಸಿರಿಮನೆ ಮಾತನಾಡಿ, ಅಧಿಕಾರಿಗಳ ಕೈಗೆ ಶಿಕ್ಷಣ ವ್ಯವಸ್ಥೆ ನೀಡುವ ಹುನ್ನಾರ ನಡೆಯುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಕೋಲ್ಡ್ ಸ್ಟೋರೇಜ್ ನಲ್ಲಿರುವಾಗಲೇ ಉನ್ನತ ಶಿಕ್ಷಣ ಆಯೋಗ ರಚನೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಇದರ ಬಗ್ಗೆ ಯಾವುದೇ ಚರ್ಚೆಕೂಡ ನಡೆದಿಲ್ಲ ಎಂದರು.

ಪಠ್ಯದಲ್ಲಿ ಮನುವಾದಿ ಮೌಲ್ಯ ತುಂಬವ ಪ್ರಯತ್ನ ನಡೆಯುತ್ತಿದೆ. ಶಿಕ್ಷಣ ಸಂಸ್ಥೆ ಹಾಗೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಟನೆಗಳಿಗೆ ನೆಲೆ ಇಲ್ಲದಂತೆ ಮಾಡಲಾಗಿದೆ. ಶಿಕ್ಷಣ. ವ್ಯಾಪಾರಿಕರಣ, ಸ್ವಾಯತ್ತತೆ ಹಾಗೂ ಪಠ್ಯ ಕೇಸರಿಕಣ ನಿಲ್ಲಬೇಕು ಎಂದು ಅವರು ಹೇಳಿದರು. ಪ್ರಾಧ್ಯಾಪಕಿ ಶ್ವೇತಾ, ಕೆವಿಎಸ್‌ನ ಮುತ್ತುರಾಜ್, ಸರೋವರ ಮೊದಲಾದವರು ಇದ್ದರು.

‘ದೇಶದ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಅಧಃಪತನದತ್ತ ಸಾಗಿದೆ. ವಿಶ್ವದ 500 ಪ್ರತಿಷ್ಟಿತ ವಿಶ್ವ ವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಒಂದು ವಿಶ್ವವಿದ್ಯಾಲಯವು ಇಲ್ಲ. ಇನ್ನು ಕೇಂದ್ರ ಸರಕಾರ ಉನ್ನತ ಶಿಕ್ಷಣ ಆಯೋಗ ರಚನೆ ಮಾಡಿದರೆ, ಮುಂದಿನ ದಿನಗಳಲ್ಲಿ ವಿಶ್ವದ 1 ಸಾವಿರ ಪ್ರತಿಷ್ಟಿತ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ದೇಶದ ಒಂದು ವಿಶ್ವ ವಿದ್ಯಾಲಯವು ಸಿಗುವುದಿಲ್ಲ’
-ಡಾ.ಜಿ.ರಾಮಕೃಷ್ಣ ಶಿಕ್ಷಣ ತಜ್ಞ


ಹಕ್ಕೋತ್ತಾಯಗಳು-
-ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು.
-ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕಾಗಿ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕು.
-ಬಲಿಷ್ಟ ಆಧುನಿಕ ರಾಷ್ಟ್ರ ನಿರ್ಮಾಣಕ್ಕಾಗಿ ಪಡೆದ ಶಿಕ್ಷಣಕ್ಕೆ ತಕ್ಕ ಸುಭದ್ರ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News