​ರಾಜಸ್ಥಾನ ಮರುಭೂಮಿಯಲ್ಲಿ ಬಾಯಾರಿಕೆಯಿಂದ ಪ್ರಾಣ ಕಳೆದುಕೊಂಡ ಕಣ್ಣೂರು ಯುವಕ !

Update: 2018-08-20 04:02 GMT

ಜೈಸಲ್ಮೇರ್, ಆ. 20: ಮೋಟರ್‌ಸೈಕಲ್ ಸಾಹಸ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಕೇರಳದ ಕಣ್ಣೂರು ಮೂಲದ ಯುವಕನೊಬ್ಬ ರಾಜಸ್ಥಾನದ ಮರುಭೂಮಿಯಲ್ಲಿ ದಾರಿ ತಪ್ಪಿ ತೀವ್ರ ಬಳಲಿಕೆ ಮತ್ತು ಬಾಯಾರಿಕೆಯಿಂದ ಪ್ರಾಣ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಅಸ್ಬಕ್ ಮೋನ್ (34) ಮೂಲತಃ ಕಣ್ಣೂರಿನವರಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿ. ಶನಿವಾರ ಆರಂಭವಾದ "ಇಂಡಿಯಾ ಬಾಜಾ" ಸಾಹಸ ಬೈಕ್‌ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ನಿನ್ನೆ ಮುಂಜಾನೆ ಅವರ ಮೃತದೇಹ ಮರುಭೂಮಿಯಲ್ಲಿ ಪತ್ತೆಯಾಗಿದೆ.

ಜೈಸಲ್ಮೇರ್‌ನಿಂದ ಸುಮಾರು 200 ಕಿಲೋಮೀಟರ್ ದೂರದ ಶಹಾಘರ್ ಬುಜಿ ಎಂಬಲ್ಲಿ ಅವರ ಶವ ಕಂಡುಬಂದಿದ್ದು, ಪಕ್ಕದಲ್ಲಿ ಬೈಕ್ ಬಿದ್ದಿತ್ತು ಹಾಗೂ ಖಾಲಿ ನೀರಿನ ಬಾಟಲಿ ಬಿದ್ದಿತ್ತು. ಯುವಕ ಡಿಹೈಡ್ರೇಷನ್‌ನಿಂದ ಮೃತಪಟ್ಟಿದ್ದಾಗಿ ಮರಣೋತ್ತರ ಪರೀಕ್ಷೆ ವರದಿ ಹೇಳಿದೆ ಎಂದು ಎಸ್ಪಿ ಜಗದೀಶ್ ಚಂದ್ರ ಶರ್ಮಾ ಹೇಳಿದ್ದಾರೆ. ಮೃತದೇಹವನ್ನು ಪತ್ನಿ ಹಾಗೂ ಮಾವನಿಗೆ ಹಸ್ತಾಂತರಿಸಲಾಗಿದೆ.

ಎರಡು ದಿನದ ಈ ಸಾಹಸ ರ್ಯಾಲಿಯಲ್ಲಿ ಭಾಗವಹಿಸಲು ಅಸ್ಬಕ್ ಮೋನ್ ಬೆಂಗಳೂರಿನಿಂದ ಆಗಮಿಸಿದ್ದರು ಎಂದು ಶರ್ಮಾ ವಿವರಿಸಿದ್ದಾರೆ.
ಸ್ಪರ್ಧೆಗೆ ಪೂರ್ವ ಭಾವಿಯಾಗಿ ಜೈಸಲ್ಮೇರ್ ಸುತ್ತಮುತ್ತ ಸಾಧ್ಯತೆಯನ್ನು ಪರಿಶೀಲಿಸುವ ಸಲುವಾಗಿ ಅವರು ಬೈಕ್ ಯಾನ ಕೈಗೊಂಡಿದ್ದಾಗ ಮರುಭೂಮಿಯಲ್ಲಿ ದಾರಿ ತಪ್ಪಿರಬೇಕು ಎಂದು ಶಂಕಿಸಲಾಗಿದೆ. ಆತ ಮರಳಿ ಬಾರದಿದ್ದಾಗ, ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದರು. ಆಗ ಈ ಘಟನೆ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News