ಮಲೆನಾಡು, ಕೊಡಗು, ದ.ಕ ಮಳೆಹಾನಿಯ ಮೊತ್ತ 15 ಸಾವಿರ ಕೋಟಿಗೂ ಅಧಿಕ

Update: 2018-08-20 04:54 GMT

ಬೆಂಗಳೂರು, ಆ.19: ರಾಜ್ಯದ ಕರಾವಳಿ, ಮಲೆನಾಡು ಮತ್ತು ಕೊಡಗು ಪ್ರದೇಶದಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದ 15 ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಮಳೆಹಾನಿ ಮತ್ತು ನಷ್ಟವನ್ನು ಸುಮಾರು 7,500 ಕೋಟಿ ರೂ. ಎಂದು ಆಂದಾಜಿಸಿದೆ. ಆದರೆ ಹಲವೆಡೆ ಮೂಲಭೂತ ಸೌಕರ್ಯಗಳು ಸಂಪೂರ್ಣ ಹಾನಿಗೊಳಗಾಗಿದ್ದು ಒಟ್ಟು ನಷ್ಟದ ಮೊತ್ತ 15 ಸಾವಿರ ಕೋಟಿ ರೂ. ಮೀರಬಹುದು ಎಂದು ಹೇಳಲಾಗಿದೆ. ಭೂಕುಸಿತ ಹಾಗೂ ಮಂಗಳೂರು-ಬೆಂಗಳೂರು ರಸ್ತೆ ಸಂಪರ್ಕ ಕಡಿತದಿಂದ ವಾಣಿಜ್ಯ ಚಟುವಟಿಕೆಗಳಿಗೆ ತೊಡಕಾಗಿದೆ. ರಫ್ತು ಮತ್ತು ಪ್ರವಾಸೋದ್ಯಮ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ಬಹುತೇಕ ಪ್ರದೇಶಗಳಲ್ಲಿ ಇನ್ನೂ ರಸ್ತೆಗಳು ಜಲಾವೃತಗೊಂಡಿರುವ ಕಾರಣ ನಾಶನಷ್ಟದ ನಿಖರ ಮಾಹಿತಿ ಪಡೆಯುವುದು ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಳು ಜಿಲ್ಲೆಗಳಲ್ಲಿ 1,500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ನೂರಾರು ಮನೆಗಳು ಸಂಪೂರ್ಣ ನೆಲಸಮವಾಗಿವೆ. ಕೊಡಗು ಜಿಲ್ಲೆಯಲ್ಲಿ 850ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದ್ದು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಪೂರ್ಣಗೊಂಡಾಗ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡದಲ್ಲಿ 252, ಉಡುಪಿಯಲ್ಲಿ 144, ಉತ್ತರ ಕನ್ನಡದಲ್ಲಿ 26, ಶಿವಮೊಗ್ಗದಲ್ಲಿ 46, ಚಿಕ್ಕಮಗಳೂರಿನಲ್ಲಿ 40, ಹಾಸನದಲ್ಲಿ 33 ಮನೆಗಳು ಮಳೆಯಿಂದಾಗಿ ಕುಸಿದಿವೆ. ಅಡಕೆ ಮತ್ತು ಕಾಫಿಯಂತಹ ವಾಣಿಜ್ಯ ಬೆಳೆಗಳಿಗೆ ಅಪಾರ ಹಾನಿಯಾಗಿದೆ.

ಹಲವಾರು ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೀಡಾಗಿವೆ. ರಸ್ತೆ, ರೈಲು ಮಾರ್ಗ, ಸೇತುವೆಗಳು ನೀರಿನಲ್ಲಿ ಕೊಚ್ಚಿಹೋಗಿದೆ. ಈ ಎಲ್ಲಾ ನಷ್ಟಗಳ ವಿವರ ದೊರೆತ ಬಳಿಕ ನಷ್ಟದ ನಿಖರ ಮೊತ್ತವನ್ನು ಅಂದಾಜಿಸಬಹುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News