ಕೇರಳ ಪ್ರವಾಹ ಸಂತ್ರಸ್ತರ ಬಗ್ಗೆ ಅವಹೇಳನ: ಒಮನ್‌ನಲ್ಲಿ ಕೆಲಸ ಕಳೆದುಕೊಂಡ ಕೇರಳ ವ್ಯಕ್ತಿ

Update: 2018-08-20 08:05 GMT

ದುಬೈ, ಆ.20: ಮಹಾಮಳೆಗೆ ಕೇರಳ ರಾಜ್ಯ ತತ್ತರಿಸಿಹೋಗಿದ್ದು ದೇಶ-ವಿದೇಶಗಳಿಂದ ನೆರವಿಗೆ ಮಹಾಪೂರ ಹರಿದುಬರುತ್ತಿದೆ. ಆದರೆ, ಗಲ್ಫ್‌ನಲ್ಲಿರುವ ಕೇರಳ ರಾಜ್ಯದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ತನ್ನ ರಾಜ್ಯದ ನಿರಾಶ್ರಿತರ ಬಗ್ಗೆ ಅಸಭ್ಯವಾಗಿ ಬರೆದು ಕೆಲಸ ಕಳೆದುಕೊಂಡಿದ್ದಾನೆ.

  ಒಮನ್‌ನಲ್ಲಿ ಲುಲು ಗ್ರೂಪ್ ಇಂಟರ್‌ನ್ಯಾಶನಲ್ ಕಂಪೆನಿಯಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್ ಚೆರು ಪಾಲಯಟ್ಟು ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದ  ಅಸಭ್ಯ ಬರಹಕ್ಕೆ ಕೆಲಸವನ್ನೇ ಕಳೆದುಕೊಂಡಿದ್ದಾನೆ.

  ಕೇರಳದಲ್ಲಿ ನೆರೆ ಸಂತ್ರಸ್ತ ಮಹಿಳೆಯರಿಗೆ ಸ್ಯಾನಿಟರಿ ವಸ್ತುಗಳ ಅಗತ್ಯವಿದ್ದು, ಅದಕ್ಕೆ ಸ್ವಯಂಪ್ರೇರಿತರಾಗಿ ನೆರವು ನೀಡಬೇಕೆಂಬ ಫೇಸ್‌ಬುಕ್ ಪೋಸ್ಟ್‌ಗೆ ರಾಹುಲ್ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದ.

ರಾಹುಲ್ ಫೇಸ್‌ಬುಕ್ ಬರಹಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು. ‘‘ತನ್ನ ಬರಹಕ್ಕೆ ಕ್ಷಮೆಯಾಚಿಸುವೆ. ಫೇಸ್‌ಬುಕ್ ಸಂದೇಶ ಹಾಕುವಾಗ ಅದೊಂದು ದೊಡ್ಡ ತಪ್ಪು ಎಂದು ಅರಿವಾಗಲಿಲ್ಲ’’ ಎಂದು ರಾಹುಲ್ ಹೇಳಿದ್ದಾನೆ.

ಆದರೆ, ರಾಹುಲ್ ಫೇಸ್‌ಬುಕ್ ಬರಹವನ್ನು ಗಂಭೀರವಾಗಿ ಪರಿಗಣಿಸಿದ ಲುಲು ಗ್ರೂಪ್ ಕಂಪೆನಿಯ ಮುಖ್ಯ ಸಂಪರ್ಕ ಅಧಿಕಾರಿ ನಂದಕುಮಾರ್ ರಾಹುಲ್‌ನನ್ನು ತಕ್ಷಣದಿಂದ ಕೆಲಸದಿಂದ ತೆಗೆದುಹಾಕಿದ್ದಾರೆ.

ಕೇರಳ ಜನತೆ ಸಂಕಷ್ಟದಲ್ಲಿದಾಗ ಇಂತಹ ವರ್ತನೆ ತೋರಿರುವ ಕಾರಣ ರಾಹುಲ್‌ನನ್ನು ಕೆಲಸದಿಂದ ತೆಗೆದುಹಾಕಿ ಸ್ಪಷ್ಟ ಸಂದೇಶ ನೀಡಿದ್ದೇವೆ ಎಂದು ಕಂಪೆನಿ ತಿಳಿಸಿದ್ದಾಗಿ ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News