ಕೇರಳ ನೆರೆಗೆ ಹಾಳಾದ ಶಾಲಾ ಸರ್ಟಿಫಿಕೇಟ್: ಜೀವ ಕಳೆದುಕೊಂಡ ಬಾಲಕ

Update: 2018-08-20 09:21 GMT

ತಿರುವನಂತಪುರ, ಆ.20: ಕೇರಳದಲ್ಲಿ ಸಂಭವಿಸಿದ ಶತಮಾನದ ಭೀಕರ ಪ್ರವಾಹದಿಂದಾಗ ತನ್ನ 12ನೇ ತರಗತಿಯ ಸರ್ಟಿಫಿಕೇಟ್ ಹಾಳಾಗಿ ಹೋಗಿದ್ದನ್ನು ನೋಡಲಾಗದೇ 19ರ ಹರೆಯದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಕೊಝಿಕ್ಕೋಡ್ ಜಿಲ್ಲೆಯ ಕರಂಥೂರ್ ಮೂಲದ ಕೈಲಾಶ್ ಮೃತ ವಿದ್ಯಾರ್ಥಿ. ಭೀಕರ ಪ್ರವಾಹದಿಂದಾಗಿ ಕೈಲಾಶ್ ತನ್ನ ಹೆತ್ತವರೊಂದಿಗೆ ಮೂರು ದಿನಗಳ ಹಿಂದೆ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದ. ಇಂಡಸ್ಟ್ರೀಯಲ್ ಟ್ರೈನಿಂಗ್ ಸೆಂಟರ್(ಐಟಿಐ)ಕೋರ್ಸ್‌ಗೆ ಪ್ರವೇಶಾತಿ ಪಡೆದಿದ್ದ ಕೈಲಾಶ್ ಹೊಸ ಬಟ್ಟೆಗಳನ್ನು ಖರೀದಿಸಿದ್ದ. ಉನ್ನತ ವ್ಯಾಸಂಗಕ್ಕೆ ಸ್ವಲ್ಪ ಹಣವನ್ನು ಸಂಗ್ರಹಿಸಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಳೆ ಕಡಿಮೆಯಾದ ಮೇಲೆ ರವಿವಾರ ತನ್ನ ಮನೆಗೆ ವಾಪಸಾದ ಕೈಲಾಶ್‌ನ ದ್ವಿತೀಯ ಪಿಯು ಸರ್ಟಿಫಿಕೇಟ್ ನೆರೆನೀರಿನಲ್ಲಿ ಮುಳುಗಿ ಸಂಪೂರ್ಣ ಹಾಳಾಗಿತ್ತು. ಇದರಿಂದ ನೊಂದ ಬಾಲಕ ತಂದೆ-ತಾಯಿ ಮನೆಯ ಸ್ವಚ್ಛತೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಕೊಠಡಿಯೊಳಗೆ ನೇಣುಬಿಗಿದು ಸಾವನ್ನಪ್ಪಿದ್ದಾನೆ.

ಕೈಲಾಶ್ ತಂದೆ ದಿನಗೂಲಿ ಕಾರ್ಮಿಕನಾಗಿದ್ದು, ನೆರೆಯಿಂದಾಗಿ ತನ್ನೆಲ್ಲಾ ವಸ್ತುಗಳು ಕೊಚ್ಚಿಹೋಗಿದ್ದ ಕಾರಣ ತನ್ನ ಮಗನ ಮೇಲೆ ಭಾರೀ ವಿಶ್ವಾಸ ಇಟ್ಟುಕೊಂಡಿದ್ದರು.

ಕೇರಳದಲ್ಲಿ ಸಂಭವಿಸಿದ ನೆರೆಹಾವಳಿಯಿಂದಾಗಿ ಕೆಲವು ಜನರ ಆಧಾರ್ ಕಾರ್ಡ್, ರೇಶನ್ ಕಾರ್ಡ್ ಹಾಗೂ ಇತರ ಎಲ್ಲಾ ಗುರುತುಪತ್ರಗಳು ಕಳೆದುಹೋಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News