ಬೆಂಗಳೂರು: ಸುಮಂಗಲಾ ಎಸ್.ಮುಮ್ಮಿಗಟ್ಟಿ ಅನುವಾದಿಸಿದ ‘ಕೊನೆಯ ಅಲೆ’ ಕೃತಿ ಬಿಡುಗಡೆ

Update: 2018-08-20 15:00 GMT

ಬೆಂಗಳೂರು, ಆ.20: ಮನುಷ್ಯ ನಿರ್ಮಿತ ವಸ್ತುಗಳ ಸಂರಕ್ಷಣೆ ನೀಡುವಷ್ಟು ಪ್ರಾಶಸ್ತ್ಯ, ಪ್ರಕೃತಿದತ್ತವಾಗಿ ನಿರ್ಮಾಣಗೊಂಡಿರುವುದಕ್ಕೆ ನೀಡುತ್ತಿಲ್ಲ ಎಂದು ಪರಿಸರವಾದಿ ನಾಗೇಶ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ನವಕರ್ನಾಟಕ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಸುಮಂಗಲಾ ಎಸ್.ಮುಮ್ಮಿಗಟ್ಟಿ ಅವರು ಅನುವಾದಿಸಿರುವ ‘ಕೊನೆಯ ಅಲೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಂಪಿ, ಪಟ್ಟದಕಲ್ಲು, ತಾಜ್‌ಮಹಲ್, ಎಲ್ಲೋರ, ಅಜೆಂತಾ ಗುಹೆಗಳು ಹೀಗೆ ಮಾನವ ನಿರ್ಮಿತ ಸ್ಥಳಗಳಿಗೆ ವಿಶ್ವಮಾನ್ಯ ಸ್ಥಾನ ನೀಡುತ್ತಿದ್ದಾರೆ. ಆದರೆ, ಪ್ರಕೃತಿದತ್ತವಾಗಿ ನಿರ್ಮಾಣಗೊಂಡಿರುವ ಸ್ಥಳಗಳನ್ನು ಇದುವರೆಗೂ ಗುರುತಿಸಿ, ಅಭಿವೃದ್ಧಿ ಮಾಡಲು ತಯಾರಿಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ಕಾಡುಗಳಿಗೆ ಪ್ರವಾಸಕ್ಕಾಗಿ ತೆರಳುವ ಪ್ರವಾಸಿಗರು ಅಲ್ಲಿನ ಮೂಲ ನಿವಾಸಿಗಳಾದ ಬುಡಕಟ್ಟು ಸಮುದಾಯವನ್ನು ಭಿಕ್ಷುಕರನ್ನಾಗಿಸುತ್ತಿದ್ದಾರೆ. ವಿದೇಶಗಳಿಂದ ಬರುತ್ತಿರುವ ಪ್ರವಾಸಿಗರು ಬುಡಕಟ್ಟು ಜನರ ಅಶ್ಲೀಲ ಚಿತ್ರಗಳನ್ನು ತೆಗೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆ ಮೂಲಕ ಮತ್ತಷ್ಟು ಜನರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಡಿನಲ್ಲಿ ವಾಸಿಸುತ್ತಿದ್ದ ಜೇನು ಕುರುಬ, ಹಾಲಕ್ಕಿ ಮಲೆಕುಡಿಯ ಸೇರಿದಂತೆ ಹಲವಾರು ಬುಡಕಟ್ಟು ಸಮುದಾಯದ ಜನಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹಲವಾರು ಆಮಿಷಗಳನ್ನೊಡ್ಡಿ ಅವರನ್ನು ನಗರಗಳಿಗೆ ಸೆಳೆಯುತ್ತಿದ್ದಾರೆ. ಅಲ್ಲದೆ, ಸರಕಾರಗಳು ವಿವಿಧ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಮೂಲ ನಿವಾಸಿಗಳನ್ನು ಬದುಕಲು ಬಿಡದಂತೆ ಮಾಡಲಾಗುತ್ತಿದೆ. ಆದರೆ, ಬುಡಕಟ್ಟುಗಳನ್ನು ಅವರು ಇರುವ ಸ್ಥಿತಿಯಲ್ಲಿಯೇ ನೆಮ್ಮದಿಯಾಗಿ ಬದುಕಲು ಬಿಡಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ನಾವು ಅವರನ್ನು ಕಾಣಲು ಸಿಗುವುದಿಲ್ಲ ಎಂದು ಎಚ್ಚರಿಸಿದರು.

ಅಭಿವೃದ್ಧಿಯ ಹೆಸರಿನಲ್ಲಿ ಕಾಡಿನಲ್ಲಿರುವ ಜನರನ್ನು ಒಕ್ಕಲೆಬ್ಬಿಸಿ ನಾಡಿಗೆ ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಇಂದಿನ ಕಾರ್ಪೋರೇಟ್ ಜಗತ್ತಿನಲ್ಲಿ ಕಾಡನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದ್ದಾರೆ. ಅಲ್ಲದೆ, ಕಾರ್ಪೋರೇಟ್ ಸಂಸ್ಕೃತಿ ಹಳ್ಳಿ ಜನರನ್ನು ನಗರಗಳಿಗೆ ಆಕರ್ಷಿಸುವ ಮೂಲಕ ಮೂಲ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ. ಕಳೆದ 30 ವರ್ಷಗಳಿಂದ ಬಂಡವಾಳಶಾಹಿ ವ್ಯವಸ್ಥೆ ವ್ಯವಸ್ಥಿತವಾಗಿ ಗ್ರಾಮೀಣ ಶೈಲಿಯನ್ನು ನಾಶ ಮಾಡುವ ಪ್ರಯತ್ನ ಮಾಡುತ್ತಿದೆ. ಇದು ಜಗತ್ತಿನ ವಿನಾಶಕ್ಕೆ ದಾರಿಯಾಗಿದೆ ಎಂದು ವಿಶ್ಲೇಷಿಸಿದರು.

ಕಳೆದ ಎರಡು ದಿನಗಳಿಂದ ಪುಸ್ತಕ ಓದುತ್ತಿದ್ದರೆ ಅಲ್ಲಿನ ನೈಜ ಘಟನೆಗಳು ಕಣ್ಣ ಮುಂದೆ ಕಾಣುತ್ತಿತ್ತು. ಮನುಷ್ಯ ನಿರ್ಮಿತ ಹಾಗೂ ನಿಸರ್ಗ ನಿರ್ಮಿತ ಎಲ್ಲ ವಸ್ತುಗಳೂ ಸಂಪೂರ್ಣವಾಗಿ ನಾಶವಾಗುತ್ತಿದ್ದವು. ಸೋಕಾಲ್ಡ್ ಪ್ರವಾಸಿಗರು, ರಾಜಕೀಯ ನಾಯಕರು, ಅಭಿವೃದ್ಧಿಯ ಹರಿಕಾರರು ಬಂದು ಹೇಗೆ ಪರಿಸರವನ್ನು ನಾಶ ಮಾಡುತ್ತಾರೆ ಎಂದು ಕಾದಂಬರಿ ವಿವರಿಸುತ್ತದೆ ಎಂದು ಅವರು ಬಣ್ಣಿಸಿದರು.

ಅನುವಾದಕಿ ಸುಮಂಗಲಾ ಎಸ್.ಮುಮ್ಮಿಗಟ್ಟಿ ಮಾತನಾಡಿ, ವಿಜ್ಞಾನವನ್ನು ಕಾದಂಬರಿ ಮೂಲಕ ಪ್ರಸ್ತುತ ಪಡಿಸುವ ಪ್ರಯತ್ನ ಮಾಡಿದ್ದೇನೆ. ಹಲವಾರು ವಿಜ್ಞಾನದ ಕಾದಂಬರಿಗಳಲ್ಲಿ ತಪ್ಪು ಸಂದೇಶಗಳು ರವಾನೆಯಾಗುವ ಸಂಭವವಿರುತ್ತದೆ. ಆದರೆ, ಈ ಕಾದಂಬರಿಯಲ್ಲಿ ಅದಕ್ಕೆ ಅವಕಾಶವಿಲ್ಲದಂತೆ ಬರೆದಿದ್ದಾರೆ. ಆದುದರಿಂದ ನಾನಿದನ್ನು ಅನುವಾದ ಮಾಡಿದ್ದೇನೆ. ಕಥೆ ರೂಪದಲ್ಲಿದ್ದು, ಅಲ್ಲಿನ ಎಲ್ಲ ಘಟನೆಗಳು ನೈಜ ಘಟನೆಗಳಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೂಲ ಲೇಖಕ ಪಂಕಜ್ ಸೇಖ್‌ಸರಿಯಾ, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿದ್ದನಗೌಡ ಪಾಟೀಲ್ ಉಪಸ್ಥಿತರಿದ್ದರು.

ಇತ್ತೀಚಿನ ದಿನಗಳಲ್ಲಿ ಅನೇಕ ಜೀವ ವೈವಿದ್ಯಗಳನ್ನು ಮನುಷ್ಯನ ಸ್ವಾರ್ಥಕ್ಕಾಗಿ ನಾಶ ಮಾಡಿದ್ದು, ವಿನಾಶದ ಅಂಚಿಗೆ ತಲುಪುತ್ತಿರುವ ಸಂದರ್ಭದಲ್ಲಿ ತಜ್ಞರನ್ನು ಕರೆದು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎನ್ನುತ್ತಿದ್ದೇವೆ. ಮುಂದೊಂದು ದಿನ ಕಾಡಿನಲ್ಲಿ ನಮಗೆ ಕಾಣಲು ಏನೂ ಇಲ್ಲದಂತಾಗುತ್ತದೆ. ನಮಗೆ ಅಭಿವೃದ್ಧಿ ಬೇಕಿದೆ. ಆದರೆ, ಅದಕ್ಕಾಗಿ ಪರಿಸರವನ್ನು ಬಲಿಕೊಡುವುದು ಬೇಡ.

-ನಾಗೇಶ ಹೆಗಡೆ, ವಿಜ್ಞಾನ ಲೇಖಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News