ಉಮರ್ ಖಾಲಿದ್ ಮೇಲೆ ದಾಳಿ ಮಾಡಿದ ವ್ಯಕ್ತಿ 2014ರಲ್ಲಿ ಬಿಜೆಪಿ ಕಚೇರಿಗೆ ದನದ ರುಂಡದೊಂದಿಗೆ ಬಂದಿದ್ದ!

Update: 2018-08-21 10:22 GMT

ಹೊಸದಿಲ್ಲಿ, ಆ.21: ಜೆಎನ್‍ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮೇಲೆ ಕಳೆದ ವಾರ ರಾಜಧಾನಿಯ ಕಾನ್‍ಸ್ಟಿಟ್ಯೂಶನ್ ಕ್ಲಬ್ ಆವರಣದಲ್ಲಿ ನಡೆದ ದಾಳಿ ಪ್ರಕರಣದ ಆರೋಪಿ ನವೀನ್ ದಲಾಲ್ ಈ ಹಿಂದೆ 2014ರಲ್ಲಿ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಕತ್ತರಿಸಲ್ಪಟ್ಟ ದನದ ರುಂಡದೊಂದಿಗೆ ಆಗಮಿಸಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಹತ್ಯೆಯ ವಿರುದ್ಧ ಕಠಿಣ ಕಾನೂನುಗಳನ್ನು ಆಗ್ರಹಿಸಿ ಗೋರಕ್ಷಾ ಕಾರ್ಯಕರ್ತ ಗೋಪಾಲ್ ದಾಸ್ ನೇತೃತ್ವದಲ್ಲಿ ನವೀನ್ ನನ್ನು ಒಳಗೊಂಡ ಗುಂಪು ಬಿಜೆಪಿ ಕಚೇರಿಗೆ ಅಂದು ಆಗಮಿಸಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ದಿಲ್ಲಿ ನ್ಯಾಯಾಲಯದಲ್ಲಿ ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಲಿದ್ ಮೇಲಿನ ದಾಳಿಗೆ ತಾವು ಕಾರಣರು ಎಂದು ವೀಡಿಯೋವೊಂದರಲ್ಲಿ ಹೇಳಿಕೊಂಡಿದ್ದ ನವೀನ್ ಹಾಗೂ ದರ್ವೇಶ್ ಶಾಹಪುರ್ ಎಂಬರನ್ನು ದಿಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದರು. ಅವರನ್ನು ದಿನವಿಡೀ ವಿಚಾರಣೆ ನಡೆಸಿದ ಪೊಲೀಸರು ಇಬ್ಬರೂ ಗೋ ರಕ್ಷಾ ಸಂಘಟನೆಯೊಂದರ ಜತೆ ಸಂಬಂಧ ಹೊಂದಿದ್ದು ಜನಪ್ರಿಯತೆ ಗಳಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

ನವೀನ್, ಆಗಸ್ಟ್ 13ರಂದು ಉಮರ್ ಖಾಲಿದ್ ಮೇಲೆ ದಾಳಿಗೈದಾಗ ಶಾಹಪುರ್ ಹತ್ತಿರದ ಟೀ ಸ್ಟಾಲ್ ನಲ್ಲಿ ನಿಂತಿದ್ದ. ಇಬ್ಬರೂ ಬೇರೆ ಬೇರೆ ಮಾರ್ಗದಲ್ಲಿ ತಪ್ಪಿಸಿಕೊಂಡು ನಂತರ ಝಜ್ಜರ್ ಎಂಬಲ್ಲಿ ಭೇಟಿಯಾಗಿದ್ದರು. ನವೀನ್  ಝಜ್ಜರ್ ನ ಮಂಡೊತಿ ನಿವಾಸಿಯಾಗಿದ್ದರೆ ದರ್ವೇಶ್ ಶಾಹಪುರ್ ಜಿಂದ್ ಪ್ರಾಂತ್ಯದ ನಿವಾಸಿಯಾಗಿದ್ದಾನೆ. ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಏನಾದರೂ ಪರಿಣಾಮ ಬೀರುವಂತಹ ಕೆಲಸ ಮಾಡಬೇಕೆಂದು ಬಯಸಿದ್ದರು. ಫೇಸ್ ಬುಕ್ ನಲ್ಲಿ ಕಾನ್‍ಸ್ಟಿಟ್ಯೂಶನ್ ಕ್ಲಬ್ ನಲ್ಲಿ `ಖೌಫ್ ಸೇ ಆಜಾದಿ' ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡ ಅವರು ಅದಕ್ಕೆ ತಡೆಯೊಡ್ಡಿ ಹೆಚ್ಚು ಜನರನ್ನು ಆಕರ್ಷಿಸಬೇಕೆಂದು ಬಯಸಿದ್ದರೆಂದು  ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

 ತಮ್ಮ ಸುರಕ್ಷತೆಗೆ  ಪಿಸ್ತೂಲನ್ನು ಇಟ್ಟುಕೊಂಡಿದ್ದಾಗಿ ಹಾಗೂ ಖಾಲಿದ್ ಮೇಲೆ ದಾಳಿ ನಡೆಸುವುದಕ್ಕಲ್ಲ ಎಂದು ಅವರು ಹೇಳಿದ್ದಾರೆ. ಆ ಪಿಸ್ತೂಲು ದರ್ವೇಶ್ ಶಾಹಪುರ್ ಗೆ ಸೇರಿದ್ದು ಆತ ಅದನ್ನು ಈಗ ಸತ್ತಿರುವ ಬೇರೊಬ್ಬ ವ್ಯಕ್ತಿಯಿಂದ ಪಡೆದಿದ್ದ, ಇಬ್ಬರೂ ನಂಗ್ಲಿ ಡೈರಿ ಸಮೀಪ ಭೇಟಿಯಾಗಿ ನಂತರ ಕಾನ್‍ಸ್ಟಿಟ್ಯೂಶನ್ ಕ್ಲಬ್ ಪಕ್ಕ ಬಂದಿದ್ದರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧನದ ಸಂದರ್ಭ ಇಬ್ಬರೂ ತಮ್ಮ ಸಹವರ್ತಿಗಳ ಮನೆಗಳಲ್ಲಿ ಅಡಗಿಕೊಂಡಿದ್ದರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News