ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಜಿಡಿಪಿ ಶೇ.10ರಷ್ಟಿತ್ತು ಎಂಬ ವರದಿ ಸರಕಾರಿ ವೆಬ್ ಸೈಟ್ ನಿಂದ ನಾಪತ್ತೆ!

Update: 2018-08-21 11:09 GMT

ಹೊಸದಿಲ್ಲಿ, ಆ.21: ನರೇಂದ್ರ ಮೋದಿ ಸರಕಾರದ ನಾಲ್ಕು ವರ್ಷಗಳ ಅವಧಿಗಿಂತ ಹೆಚ್ಚು ಆರ್ಥಿಕ ಬೆಳವಣಿಗೆ ಮನಮೋಹನ್ ಸಿಂಗ್‍ ಅವರು ಪ್ರಧಾನಿಯಾಗಿದ್ದ ಸಂದರ್ಭದ ಯುಪಿಎ ಸರಕಾರದ ಕಾಲದಲ್ಲಿ ಆಗಿದೆ ಎನ್ನುವ ವರದಿ ಸರಕಾರಿ ವೆಬ್ ಸೈಟ್ ನಿಂದ ನಾಪತ್ತೆಯಾಗಿದೆ ಎಂದು indiatoday.in ವರದಿ ಮಾಡಿದೆ.

ಕೇಂದ್ರ ಅಂಕಿಅಂಶ ಸಚಿವಾಲಯ ನಿಯೋಜಿಸಿದ ತಜ್ಞರ ಸಮಿತಿಯ ವರದಿಯನ್ನು ವೆಬ್‍ಸೈಟಿನಿಂದ ತೆರವುಗೊಳಿಸಲಾಗಿದೆ. ತನ್ನ ಈ ಕ್ರಮಕ್ಕೆ ಸಚಿವಾಲಯ ಇದು ಅಂತಿಮ  ವರದಿಯಲ್ಲ. ಆದ್ದರಿಂದ ಕರಡು ವಿಭಾಗಕ್ಕೆ ಸೇರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಅರ್ಥ ತಜ್ಞ ಸುದೀಪ್ತೊ ಮುಂಡಲ್‍ರ ನೇತೃತ್ವದ ಸಮಿತಿ ಜಿಡಿಪಿ ಲೆಕ್ಕ ಮಾಡುವ ಹೊಸ ಮಾನದಂಡಗಳಡಿಯಲ್ಲಿ  1994ರಿಂದೀಚೆಗಿನ ದೇಶದ ಆರ್ಥಿಕ ಬೆಳವಣಿಗೆಯನ್ನು ಪುನರ್‍ ನಿರ್ಣಯಿಸಿ ವರದಿ ತಯಾರಿಸಿದ್ದರು. ಹೊಸ ಮಾನದಂಡಗಳ ಪ್ರಕಾರ ಜಿಡಿಪಿಯನ್ನು ಪುನರ್‍ ನಿರ್ಣಯಿಸಿದಾಗ ಮನಮೋಹನ್ ಸಿಂಗ್ ಕಾಲದಲ್ಲಿ ಜಿಡಿಪಿ ಸರಾಸರಿ 8.1 ಶೇಕಡ ಆಗಿದ್ದರೆ, ಮೋದಿ ಸರಕಾರದ ನಾಲ್ಕು ವರ್ಷಗಳ ಜಿಡಿಪಿ ಸರಾಸರಿ 7.3 ಶೇಕಡ ಆಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. 2007-08ರಲ್ಲಿ 10.23 ಶೇಕಡಾ ಜಿಡಿಪಿ ದರ ಇದ್ದರೆ,  2010-11ರಲ್ಲಿ 10.78 ಶೇಕಡ ಜಿಡಿಪಿ ದರ ಆಗಿತ್ತು. ಆದರೆ ಮೋದಿ ಆಡಳಿತದಲ್ಲಿ ಈವರೆಗೆ ಆಗಿರುವ ಅತಿಹೆಚ್ಚು ಆರ್ಥಿಕ ಬೆಳವಣಿಗೆ  7.06 ಆಗಿದೆ.  ಇದು  2015-16ರಲ್ಲಿ ನಡೆದಿತ್ತು ಎಂದು ವರದಿ ವಿವರಿಸಲಾಗಿದೆ.  ಅಂಕಿಅಂಶ ಸಚಿವಾಲಯ ಕಳೆದ ಜುಲೈ ತಿಂಗಳ ಕೊನೆಯಲ್ಲಿ  ವೆಬ್‍ಸೈಟ್‍ನಲ್ಲಿ  ವರದಿಯನ್ನು ಪ್ರಕಟಿಸಿತ್ತು.  ಆದರೆ ಮಾಧ್ಯಮಗಳಲ್ಲಿ  ಇದು  ಕಳೆದ ವಾರವಷ್ಟೇ ವರದಿಯಾಗಿತ್ತು.

ನಂತರ  ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳು ಇದನ್ನು ಚರ್ಚೆಗೆತ್ತಿಕೊಂಡವು. ಸಚಿವಾಲಯ ವರದಿಯನ್ನು ವೆಬ್‍ಸೈಟಿನಿಂದ ತೆರವುಗೊಳಿಸಿ  ಇದು ಅಂತಿಮ ವರದಿಯಲ್ಲ. ವರದಿಯ ವಿವರಗಳು ಇನ್ನೂ ಅಂತಿಮಗೊಂಡಿಲ್ಲ. ವರದಿಯನ್ನು ಮಾಧ್ಯಮಗಳು  ಪ್ರಕಟಿಸಬಾರದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದೆ. ವರದಿಯನ್ನು ಕರಡು ವಿಭಾಗದಲ್ಲಿ ಸಚಿವಾಲಯ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News