ಕೇಕ್ ಕಟ್ ಮಾಡಿ.. ಪ್ರಾಣಿಹತ್ಯೆ ನಿಲ್ಲಿಸಿ: ವಿವಾದ ಎಬ್ಬಿಸಿದ ಆರೆಸ್ಸೆಸ್ ಸಹ ಸಂಘಟನೆಯ ಹೇಳಿಕೆ

Update: 2018-08-23 03:43 GMT

ಲಕ್ನೋ, ಆ. 23: ಆಡಿನ ಪ್ರತಿಕೃತಿಯ ಕೇಕ್ ಕತ್ತರಿಸುವ ಮೂಲಕ ಬಕ್ರೀದ್ ಆಚರಿಸಿ, ಪ್ರಾಣಿಬಲಿ ಸಂಪ್ರದಾಯ ನಿಲ್ಲಿಸಿ ಎಂದು ತನ್ನ ಸದಸ್ಯರಿಗೆ ಮುಸ್ಲಿಂ ರಾಷ್ಟ್ರೀಯ ಮಂಚ್ ಕರೆ ನೀಡಿರುವುದು ಉತ್ತರ ಪ್ರದೇಶದಲ್ಲಿ ವಿವಾದಕ್ಕೆ ಕಾರಣವಾಗಿದೆ. ಆದರೆ ಮಂಚ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದು, ಇದು ಪರಿಸರ ಸ್ನೇಹಿ ಈದ್ ಆಚರಿಸುವ ಕ್ರಮ ಎಂದು ಹೇಳಿಕೊಂಡಿದೆ. ರಾಜ್ಯದಲ್ಲಿ ಮಂಚ್ 13 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.

"ಪ್ರಾಣಿಬಲಿಯನ್ನು ಖುರ್ ಆನ್ ಎಂದೂ ಪ್ರತಿಪಾದಿಸಿಲ್ಲ" ಎಂದು ಮಂಚ್ ಉಪಾಧ್ಯಕ್ಷ ರಯೀಸ್ ರಾಜಾ ಹೇಳಿದ್ದಾರೆ.

"ಇಬ್ರಾಹಿಂ ಭಕ್ತಿಗಾಗಿ ಒಮ್ಮೆ ಪ್ರಾಣಿ ಬಲಿ ನೀಡುವಂತೆ ಪ್ರವಾದಿ ಮುಹಮ್ಮದ್ ಸೂಚಿಸಿದ್ದರು. ಅದರೆ ಇಂಥದ್ದನ್ನು ಖುರ್ ಆನ್ ಎಂದೂ ಬೋಧಿಸಿಲ್ಲ. ಇದರ ಬದಲಾಗಿ, ಮನುಷ್ಯರು ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ಕಾಳಜಿ ತೋರಿದರೆ, ದೇವರು ಅವರ ಮೇಲೆ ಕರುಣೆಯನ್ನು ಹರಿಸುತ್ತಾರೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ" ಎಂದು ರಾಜಾ ಹೇಳಿದ್ದಾರೆ.

ಪ್ರಾಣಿಹತ್ಯೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಮಂಚ್ ಆರಂಭದಿಂದಲೂ ಶ್ರಮಿಸುತ್ತಾ ಬಂದಿದೆ. ಆದರೆ ಎಸ್ಪಿ ಮತ್ತು ಬಿಎಸ್ಪಿ ಸರ್ಕಾರಗಳು ಪ್ರಾಣಿಬಲಿ ವಿಚಾರದಲ್ಲಿ ಧರ್ಮಗುರುಗಳು ಮತ್ತು ಮೂಲಭೂತವಾದಿಗಳನ್ನು ಬೆಂಬಲಿಸಿವೆ. ಆದರೆ ಪ್ರಾಣಿಬಲಿಯನ್ನು ನಿಷೇಧಿಸಿದ ಆದಿತ್ಯನಾಥ್ ಸರ್ಕಾರಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ರಾಜಾ ಹೇಳಿದ್ದಾರೆ.

ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆಸುವುದು, ತೆರೆದ ಪ್ರದೇಶದಲ್ಲಿ ಪ್ರಾಣಿಹತ್ಯೆ ಮಾಡುವುದನ್ನು ನಿಷೇಧಿಸಿ ಉತ್ತರ ಪ್ರದೇಶ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು. ರಾಜಾ ಅವರ ಹೇಳಿಕೆಯನ್ನು ಸುನ್ನಿ ಹಾಗೂ ಶಿಯಾ ಪಂಗಡಗಳ ಧರ್ಮಗುರುಗಳು ಖಂಡಿಸಿದ್ದಾರೆ.

"ಇಸ್ಲಾಂಗೆ ವಿರುದ್ಧವಾದ ಮಂಚ್ ಅನ್ನು ನಾವು ಖಂಡಿಸುತ್ತೇವೆ. ಕೆಎಫ್‌ಸಿ ಮತ್ತು ಮೆಕ್‌ಡೊನಾಲ್ಡ್‌ನಂಥ ಸಂಸ್ಥೆಗಳು ಪ್ರತಿದಿನ ಲಕ್ಷಾಂತರ ಪ್ರಾಣಿಗಳನ್ನು ಹತ್ಯೆ ಮಾಡುತ್ತಿವೆ. ಆರೆಸ್ಸೆಸ್ ಅಥವಾ ಸಹ ಸಂಘಟನೆಗಳು ಇದನ್ನು ಏಕೆ ನಿಷೇಧಿಸುತ್ತಿಲ್ಲ?" ಎಂದು ಲಕ್ನೋ ಈದ್ಗಾದ ಇಮಾಮ್ ಖಲೀದ್ ರಶೀದ್ ಫರಂಗಿ ಮಹಾಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News