ಯುಎಇ ನೆರವು: ಕೇಂದ್ರ- ಕೇರಳ ಸರ್ಕಾರದ ನಡುವೆ ಹಗ್ಗಜಗ್ಗಾಟ

Update: 2018-08-23 06:41 GMT

ಹೊಸದಿಲ್ಲಿ/ ತಿರುವನಂತಪುರ, ಆ. 23: ಕೇರಳ ಪ್ರವಾಹ ಪರಿಹಾರಕ್ಕೆ ವಿದೇಶಿ ಸರ್ಕಾರಗಳ ನೆರವನ್ನು ಭಾರತ ಸ್ವೀಕರಿಸುವುದಿಲ್ಲ ಎಂದು ಬುಧವಾರ ಸ್ಪಷ್ಟಪಡಿಸುವ ಮೂಲಕ ಕೇಂದ್ರ ಸರ್ಕಾರ ಈ ಸಂಬಂಧ ಎದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.

ನೆರವಿನ ಭರವಸೆ ನೀಡಿರುವ ವಿವಿಧ ಸರ್ಕಾರಗಳಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೃತಜ್ಞತೆ ಸಲ್ಲಿಸಿದೆ. ಆದರೆ, "ಪ್ರಸ್ತುತ ಇರುವ ನೀತಿಯ ಅನ್ವಯ, ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಿಗೆ ಇರುವ ಅಗತ್ಯತೆಗಳನ್ನು ಆಂತರಿಕ ಪ್ರಯತ್ನಗಳಿಂದಲೇ ಪೂರೈಸಿಕೊಳ್ಳಲಿದೆ" ಎಂದು ಸಚಿವಾಲಯದ ಪ್ರಕಟಣೆ ಸ್ಪಷ್ಟಪಡಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ರಾಜ್ಯದಲ್ಲಿ ಪರಿಹಾರ ಕಾರ್ಯಗಳಿಗಾಗಿ 700 ಕೋಟಿ ರೂಪಾಯಿಗಳನ್ನು ನೀಡಲು ಮುಂದೆ ಬಂದಿದ್ದು, ಇದನ್ನು ಸ್ವೀಕರಿಸುವಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಪ್ರಯತ್ನ ಮಾಡಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ತನ್ನ ನಿರ್ಧಾರವನ್ನು ಪ್ರಕಟಿಸಿದೆ.

"ಇಂಥ ಸಮಸ್ಯೆ ಇದ್ದರೆ, ರಾಜ್ಯ ಸರ್ಕಾರ ಅಧಿಕಾರಿಗಳ ಮಟ್ಟದಲ್ಲಿ ಇದನ್ನು ಬಗೆಹರಿಸಲು ಪ್ರಯತ್ನಿಸಲಿದೆ. ಅಗತ್ಯ ಬಿದ್ದರೆ ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಬಳಿಗೂ ಒಯ್ಯಲಾಗುತ್ತದೆ" ಎಂದು ಸಿಎಂ ಹೇಳಿದ್ದರು.

ಯುಎಇ ನೆರವು ಘೋಷಿಸಿದ ತಕ್ಷಣ ಪ್ರಧಾನಿ ಮೋದಿ ಟ್ವೀಟ್ ಮಾಡಿ ಇದನ್ನು ಸ್ವಾಗತಿಸಿದ್ದರು. "ವಿಕೋಪದ ವೇಳೆ ದೇಶಗಳು ಪರಸ್ಪರ ನೆರವಾಗುವುದು ಸಹಜ. 2016ರ ಮೇ ತಿಂಗಳಲ್ಲಿ ಪ್ರಕಟಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನೀತಿಯ ಅನ್ವಯ, ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ವಿದೇಶಗಳು ನೀಡುವ ನೆರವನ್ನು ಸ್ವೀಕರಿಸಲು ಅವಕಾಶವಿದೆ ಎಂದು ವಿಜಯನ್ ಉಲ್ಲೇಖಿಸಿದ್ದಾರೆ.

ರಾಜ್ಯ ಸರ್ಕಾರ ವಿಶ್ವದ ಯಾವುದೇ ಮೂಲೆಯಿಂದ ನೆರವು ಹರಿದು ಬಂದರೂ ಸ್ವಾಗತಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಗಳಿಸಿದ ಜಯವನ್ನು ಕೇರಳ ಪ್ರವಾಹ ಸಂತ್ರಸ್ತರಿಗೆ ಅರ್ಪಿಸಿದ ವಿರಾಟ್ ಕೊಹ್ಲಿಯವರ ಕ್ರಮವನ್ನೂ ವಿಜಯನ್ ಸ್ವಾಗತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News