ಆತ್ಮಸ್ಥೈರ್ಯ ತುಂಬುವ ಕೆಲಸವನ್ನೂ ಮೋದಿ ಮಾಡಲಿಲ್ಲ: ಡಿಸಿಎಂ ಪರಮೇಶ್ವರ್

Update: 2018-08-24 13:12 GMT

ಬೆಂಗಳೂರು, ಆ. 24: ‘ಕೇರಳ ಅತಿವೃಷ್ಟಿಯ ವೈಮಾನಿಕ ಪರಿಶೀಲನೆಗೆ ಆಗಮಿಸಿದ್ದ ಪ್ರಧಾನಿ ಮೋದಿ ಕರ್ನಾಟಕದ ಕೊಡಗು ಜಿಲ್ಲೆಗೆ ವಿಮಾನವನ್ನು ತಿರುಗಿಸಬಹುದಿತ್ತು. ನಮ್ಮ ರಾಜ್ಯಕ್ಕೆ ಬರುವುದು ಬಿಡಿ, ಕನಿಷ್ಠ ಅನುಕಂಪ ವ್ಯಕ್ತಪಡಿಸಿ, ಆತ್ಮಸ್ಥೈರ್ಯ ತುಂಬುವ ಕೆಲಸವನ್ನೂ ಅವರು ಮಾಡಲಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ದೂರಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇರಳ ಅತಿವೃಷ್ಟಿಯ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ, ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾತೇ ಆಡಲಿಲ್ಲ. ಮಲತಾಯಿ ಧೋರಣೆ ಸರಿಯಲ್ಲ ಎಂದು ಆಕ್ಷೇಪಿಸಿದರು.

ಕೊಡಗು ಜಿಲ್ಲೆಯಲ್ಲಿನ ಮಳೆ-ಪ್ರವಾಹ, ಗುಡ್ಡ ಕುಸಿತದಿಂದ ಆಗಿರುವ ಹಾನಿಯ ಬಗ್ಗೆ ವರದಿ ಸಿದ್ಧಪಡಿಸಿ ಕೂಡಲೇ ಕೇಂದ್ರ ಸರಕಾರಕ್ಕೆ ನೆರವು ಕೋರಲಾಗುವುದು ಎಂದ ಅವರು, ಕೊಡಗು ಪುನರ್ ನಿರ್ಮಾಣಕ್ಕೆ ರಾಜ್ಯ ಸರಕಾರ ಬದ್ಧ. ರಸ್ತೆ, ಸೇತುವೆ, ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ದುರ್ಬಳಕೆ ಆಗಿಲ್ಲ: ಪರಿಹಾರ ಸಾಮಗ್ರಿಗಳು ಯಾವುದೇ ಕಾರಣಕ್ಕೂ ದುರ್ಬಳಕೆ ಆಗಿಲ್ಲ, ದುರ್ಬಳಕೆಗೆ ಅವಕಾಶ ನೀಡುವುದಿಲ್ಲ. ಕೊಡಗಿನಲ್ಲಿ ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಪರಿಹಾರ ಸಾಮಗ್ರಿಗಳನ್ನು ಮೈಸೂರಿನಲ್ಲಿ ಶೇಖರಣೆ ಮಾಡಿದ್ದು, ಅಲ್ಲಿಂದ ಕೊಡಗಿಗೆ ರವಾನಿಸಲಾಗುವುದು ಎಂದರು.

ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿಯೂ ಅಗತ್ಯ ಶಸ್ತ್ರಾಸ್ತ್ರಗಳಿವೆ. ಆದರೂ, ಈ ಸಂಬಂಧದ ಸಿಎಜಿ ವರದಿಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆದ್ಯತೆ ಮೇಲೆ ಕ್ರಮ ವಹಿಸಲಾಗುವುದು. ಈ ಬಗ್ಗೆ ವರದಿ ನೀಡಲು ಸೂಚಿಸಿದ್ದು, ತಾನೇ ಖುದ್ದು ಪರಿಶೀಲಿಸಿ ಆಯುಧ ಕೊರತೆ ಇದ್ದರೆ ಪರಿಹರಿಸಲಾಗುವುದು ಎಂದರು.

‘ಕೊಡಗು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ದೃಷ್ಟಿಯಿಂದ ಮುಖ್ಯಮಂತ್ರಿ, ಸಚಿವರ ಸನ್ಮಾನಕ್ಕೆ ಹಾರ, ತುರಾಯಿ, ಹೂಗುಚ್ಛ, ಶಾಲು ನೀಡುವ ಬದಲಿಗೆ ಆ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ನೀಡುವಂತೆ ಸುತ್ತೋಲೆ ಹೊರಡಿಸಲು ಸಿಎಂಗೆ ಮನವಿ ಮಾಡಲಾಗುವುದು’

-ಡಾ.ಜಿ.ಪರಮೇಶ್ವರ್, ಡಿಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News