ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಖಂಡಿಸಿ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ: ಸೆ.5 ಕ್ಕೆ ರಾಜಭವನ ಚಲೋ

Update: 2018-08-24 14:10 GMT

ಬೆಂಗಳೂರು, ಆ.24: ವಿಚಾರವಾದಿ, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗಳನ್ನು ಖಂಡಿಸಿ ಸೆ.5ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಗೌರಿ ಲಂಕೇಶ್ ಬಳಗ ಮತ್ತು ಗೌರಿ ಸ್ಮಾರಕ ಟ್ರಸ್ಟ್ ತಿಳಿಸಿದೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ದೇಶದೆಲ್ಲೆಡೆ ವಿಚಾರವಾದಿಗಳ ಗುರಿಯಾಗಿಸಿಕೊಂಡು ಹತ್ಯೆ ನಡೆಸಲಾಗುತ್ತಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಇದರ ವಿರುದ್ಧ ಬಹುದೊಡ್ಡ ಜನಾಂದೋಲನ ರೂಪಿಸಲಾಗಿದೆ ಎಂದು ತಿಳಿಸಿದರು.

ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆ ಖಂಡಿಸಿ ಇದೇ 30ರಂದು ಧಾರವಾಡದಲ್ಲಿ ‘ಕಲಬುರ್ಗಿ ದಿನ’ ಕಾರ್ಯಕ್ರಮ ನಡೆಸಲಾಗುವುದು. ಅದೇ ರೀತಿ, ಗೌರಿ ಲಂಕೇಶ್ ಹತ್ಯೆದಿನ, ಸೆ.5ರಂದು ಬೆಳಗ್ಗೆ 10:30ಕ್ಕೆ ಬೆಂಗಳೂರಿನಲ್ಲಿ ರಾಜಭವನ ಚಲೋ ನಡೆಸಿ, ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಸಮಾವೇಶ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿಗಳಾದ ಡಾ.ಎಂ.ಎಂ.ಕಲಬುರ್ಗಿ, ಪನ್ಸಾರೆ, ದಾಭೋಲ್ಕರ್ ದೇಶ ಒಡೆಯುವ ಕೆಲಸ ಮಾಡಿಲ್ಲ. ಇವರೆಲ್ಲ ಬಹುತ್ವದಲ್ಲಿ ಏಕತ್ವವನ್ನು ಸಾಧಿಸಲು ಶ್ರಮಿಸಿದವರು. ಇವರ ಹತ್ಯೆಯಿಂದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸವಾಗಿದೆ. ಅಷ್ಟೇ ಅಲ್ಲದೆ, ಮತಾಂಧ ಶಕ್ತಿಗಳ ಪಟ್ಟಿಯಲ್ಲಿ ಇನ್ನೂ 60 ಜನರಿದ್ದು, ಅದರಲ್ಲಿ 25 ಜನರ ಹತ್ಯೆಗೆ ಅಪ್ಪಣೆ ಸಿಕ್ಕರೆ, ಅವರ ಎದೆಗೆ ಗುಂಡಿಕ್ಕುವ ತವಕದಲ್ಲಿದ್ದಾರೆ ಎಂದರು.

ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದೆಲ್ಲೆಡೆ ಕೋಮುವಾದ, ಜಾತಿವಾದ, ಅಸಹಿಷ್ಣುತೆ ಹೆಚ್ಚಾಗುತ್ತಿದ್ದು, ಗೋ ರಕ್ಷಣೆಯ ಹೆಸರಿನಲ್ಲಿ ದಲಿತರ, ಶೋಷಿತರ ಮೇಲೆ ದೌರ್ಜನ್ಯ, ಗಂಭೀರ ಹಲ್ಲೆಗಳು ನಡೆಯುತ್ತಿವೆ. ಆದರೂ, ತಪ್ಪಿತಸ್ಥರ ವಿರುದ್ಧ ಇದುವರೆಗೂ ಕೇಂದ್ರ ಸರಕಾರ ದಿಟ್ಟ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಟ್ರಸ್ಟ್‌ನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಕಲಬುರ್ಗಿ ಹತ್ಯೆಯಾದ ದಿನವನ್ನು ದೌರ್ಜನ್ಯ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಸೆ. 2ರಂದು ಮತಾಂಧ ಶಕ್ತಿಗಳಿಂದ ಬೆದರಿಕೆ ಎದುರಿಸುತ್ತಿರುವ ಬರಹಗಾರ ಯೋಗೇಶ್ ಮಾಸ್ಟರ್, ವಿಚಾರವಾದಿ ಕೆ.ಎಸ್. ಭಗವಾನ್, ತೀಸ್ತಾ ಸೆಟಲ್ವಾಡ್, ಜಿಗ್ನೇಶ್ ಮೇವಾನಿ ಸೇರಿದಂತೆ ನೂರಾರು ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಗೌರಿ ಹತ್ಯೆ ತನಿಖೆಯಿಂದ ದೇಶದಲ್ಲಿ ಪೂರ್ವಯೋಜಿತವಾಗಿ ನಡೆಯುತ್ತಿರುವ ಚಿಂತಕರ ಹತ್ಯೆಗಳ ಒಂದೊಂದೆ ಪ್ರಕರಣ ಹೊರ ಬೀಳುತ್ತಿದ್ದು, ಹತ್ಯೆಯ ರೂವಾರಿ ಸನಾತನ ಸಂಸ್ಥೆಯನ್ನು ಭಯೋತ್ಪಾದಕ ಸಂಸ್ಥೆಯೆಂದು ಘೋಷಿಸಿ, ಕಾಣದ ಕೈಗಳ ಆರ್ಥಿಕ, ರಾಜಕೀಯ ಶಕ್ತಿಗಳ ಕುರಿತು ಸೂಕ್ತ ತನಿಖೆ ನಡೆಸಬೇಕು. ಇದರ ಮೂಲಕ ಅದರ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬುದು ಅಭಿವ್ಯಕ್ತಿ ಸ್ವಾತಂತ್ರ ಸಮಾವೇಶದ ಪ್ರಮುಖ ಹಕ್ಕೊತ್ತಾಯಗಳು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಟ್ರಸ್ಟ್ ಅಧ್ಯಕ್ಷ ಪ್ರೊ.ವಿ.ಎಸ್.ಶ್ರೀಧರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಸಮಾವೇಶದ ಪ್ರಮುಖ ಬೇಡಿಕೆ
* ಈ ಕೂಡಲೇ ಸನಾತನ ಸಂಸ್ಥೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಬೇಕು.
* ಸನಾತನ ಸಂಸ್ಥೆಯ ಎಲ್ಲ ಚಟುವಟಿಕೆ ನಿಷೇಧಿಸಬೇಕು.

ಪ್ರಧಾನಿ ಉತ್ತರಿಸಲಿ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ಯಾರ ಸರದಿ ಎಂದು ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು. 

-ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News