ದಂತ ವೈದ್ಯಕೀಯ ಸೀಟು ಭರ್ತಿಗೆ ಆ.7, ಸೆ.6ರಂದು ಕೌನ್ಸಿಲಿಂಗ್: ಡಿ.ಕೆ.ಶಿವಕುಮಾರ್

Update: 2018-08-24 15:38 GMT

ಬೆಂಗಳೂರು, ಆ.24: ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಬಾಕಿ ಉಳಿದಿರುವ ಸೀಟುಗಳಿಗೆ ಆ.27 ಹಾಗೂ ಸೆ.6ರಂದು ಮಾಪ್‌ಅಪ್ ರೌಂಡ್ ಕೌನ್ಸಿಲಿಂಗ್ ನಡೆಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ವೈದ್ಯಕೀಯ ಶಿಕ್ಷಣದ ಸಿಇಟಿ ಮಾಪ್ ರೌಂಡ್ ಕೊನೆ ದಿನವಾದ ಇಂದು ಬೆಳಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣದಲ್ಲಿ 65 ಸಾವಿರ ಸೀಟುಗಳಿದ್ದವು. ಅದಕ್ಕೆ ನಡೆದ ನೀಟ್ ಪರೀಕ್ಷೆಯಲ್ಲಿ ರ್ಯಾಂಕಿಂಗ್ ಆಧಾರದ ಮೇಲೆ ಆನ್‌ಲೈನ್ ಕೌನ್ಸಲಿಂಗ್ ಮೂಲಕ ಮೆಡಿಕಲ್ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಬಾಕಿ ಉಳಿದಿರುವ 740 ಸೀಟುಗಳಿಗೆ ಇಂದು ಕೊನೆಯ ಸುತ್ತಿನ ಮಾಪ್‌ಅಪ್ ರೌಂಡನ್ನು ನಡೆಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಪಾಲಿಗೆ 8,250 ಸೀಟುಗಳು ಬಂದಿದ್ದವು. ಅದರಲ್ಲಿ 1,880 ಸೀಟುಗಳು ಡೀಮ್ಡ್ ವಿವಿಗೆ ಸೇರಿದಾಗಿದ್ದು, ಅವುಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಕೌನ್ಸಿಲಿಂಗ್ ನಡೆದಿದೆ. ರಾಜ್ಯದ 49 ವೈದ್ಯಕೀಯ ಕಾಲೇಜುಗಳಿಂದ 6,260 ಸೀಟುಗಳಿಗೆ ಆನ್‌ಲೈನ್ ಕೌನ್ಸಿಲಿಂಗ್ ನಡೆಸಲಾಗಿದೆ. ಎಲ್ಲ ಸೀಟುಗಳನ್ನು ಪಾರದರ್ಶಕವಾಗಿಯೆ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ನಾನು ಖುದ್ದಾಗಿ ಕೌನ್ಸಿಲಿಂಗ್‌ಗೆ ಬಂದು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಮಾತನಾಡಿದ್ದೇನೆ. ಪರೀಕ್ಷಾ ಪ್ರಾಧಿಕಾರ ನಡೆಸಿದ ಪಾರದರ್ಶಕ ಕೌನ್ಸಿಲಿಂಗ್ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದು ಕೊನೆಯ ಸುತ್ತಿನ ಮಾಪ್‌ಅಪ್ ರೌಂಡ್‌ನಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದ್ದು, ಸೀಟು ಪಡೆಯಲು ಇಚ್ಛಿಸುವವರು, ಸಾಮರ್ಥ್ಯ ಇರುವವರು ಸ್ಥಳದಲ್ಲೆ ಆಯ್ಕೆಯಾಗಿದ್ದಾರೆ ಎಂದು ಅವರು ವಿವರಿಸಿದರು.

ರಜಾ ದಿನಗಳಾಗಿದ್ದರೂ ಯಾರಿಗೂ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆವರಣದಲ್ಲೆ ಬ್ಯಾಂಕ್‌ಗಳ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಪೋಷಕರಿಗೆ ಹೆಚ್ಚಿನ ಮಾಹಿತಿ ನೀಡಲು 15 ಟೆಲಿಫೋನ್ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈಗಾಗಲೆ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್ ಮೂಲಕ ಎಲ್ಲ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.

ನಾವು ನಡೆಸಿರುವ ಸಿಇಟಿ ಕೌನ್ಸಿಲಿಂಗ್ ದೇಶದಲ್ಲೆ ಮಾದರಿಯಾಗಿದ್ದು, ಮಹಾರಾಷ್ಟ್ರ, ಕೇರಳ, ತಮಿಳುನಾಡು ನಮ್ಮನ್ನು ಅನುಸರಿಸುತ್ತಿವೆ. ರಾಜ್ಯ ಸರಕಾರ ಯಾವುದೆ ಹಂತದಲ್ಲೂ ಪರೀಕ್ಷಾ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಇಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಧಿಕಾರಿಗಳಿಗೆ ನಿಯಮಾನುಸಾರ ಕಾರ್ಯನಿರ್ವಹಿಸಲು ಮುಕ್ತ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

ನಿನ್ನೆ ಮತ್ತು ಇಂದು ನಡೆದ ವೈದ್ಯಕೀಯ ಕೌನ್ಸಿಲಿಂಗ್ ಮಾಪ್‌ಅಪ್‌ನಲ್ಲಿ ನೆರೆ ಪೀಡಿತ ಕೊಡಗು ಮತ್ತು ಕೇರಳ ವಿದ್ಯಾರ್ಥಿಗಳು ಭಾಗವಹಿಸಲು ಸಾಧ್ಯವಾಗದೆ ಇರುವ ಬಗ್ಗೆ ಪ್ರಶ್ನಿಸಿದಾಗ, ಇಲ್ಲಿಯವರೆಗೂ ಯಾವ ಅಭ್ಯರ್ಥಿಯು ಈ ಬಗ್ಗೆ ದೂರು ಸಲ್ಲಿಸಿಲ್ಲ. ಇದು ಅಖಿಲ ಭಾರತ ಮಟ್ಟದ ಕೌನ್ಸಿಲಿಂಗ್ ಆಗಿರುವುದರಿಂದ ದಿಢೀರನೆ ನಿಯಮಗಳನ್ನು ಬದಲಿಸಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದರು. ಈ ವೇಳೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮಂಜುಳಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News