ಹಿಂದುಳಿದವರು ಹೋರಾಡಿದರೆ ರಾಜಕೀಯ ಶಕ್ತಿ ಪಡೆದುಕೊಳ್ಳಲು ಸಾಧ್ಯ: ಪಿ.ಜಿ.ಆರ್.ಸಿಂಧ್ಯಾ

Update: 2018-08-24 16:32 GMT

ಬೆಂಗಳೂರು, ಆ.24: ಹಿಂದುಳಿದ ಸಮುದಾಯಗಳು ಸಂಘಟಿತ ಹೋರಾಟ ಕೈಗೊಂಡರೆ ಮಾತ್ರ ರಾಜಕೀಯ ಶಕ್ತಿ ಪಡೆದುಕೊಳ್ಳಲು ಸಾಧ್ಯ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಇಂದಿಲ್ಲಿ ಹೇಳಿದರು.

ಶುಕ್ರವಾರ ನಗರದ ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿಹಬ್ಬ ಭವನದಲ್ಲಿ ಆಯೋಜಿಸಿದ್ದ, ಭಗವಾನ್ ಜಿಹ್ವೇಶ್ವರ ಜಯಂತಿ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜಕೀಯ ಅಧಿಕಾರ ಕೆಲವರಿಗೆ ಮಾತ್ರ ಸೀಮಿತವಾಗಿದೆ. ಆದರೆ, ಹಿಂದುಳಿತ ಸಮುದಾಯ ರಾಜಕೀಯವಾಗಿ ಪ್ರಗತಿ ಹೊಂದ ಬೇಕಾದರೆ, ಹೋರಾಟ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಬಲಿಷ್ಠವಾಗಬೇಕು. ಸರಕಾರದ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿಯೊಂದು ಸಮುದಾಯವು ತನ್ನದೇ ಆದ ಪರಂಪರೆ, ಸಾಂಸ್ಕೃತಿಕ ಮೌಲ್ಯ ಹಾಗೂ ಸಂಪ್ರದಾಯಗಳನ್ನು ಹೊಂದಿದೆ. ಸಾಂಸ್ಕೃತಿಕ ಮೌಲ್ಯಗಳ ಸಂಶೋಧನೆಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಬೇಕು. ಈ ಮೂಲಕ ನಮ್ಮ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಕೊಂಡಯ್ಯಬೇಕು ಎಂದರು.

ವಿಧಾನಪರಿಷತ್ ಸದಸ್ಯ ರಿಝ್ವನ್ ಅಶರ್ದ್ ಮಾತನಾಡಿ, ಸಮಾಜದಲ್ಲಿ ಹಿಂದುಳಿದ ವರ್ಗಗಳ ಪರ ಧ್ವನಿಗೂಡಿಸುವ ಜನ ಪ್ರತಿನಿಧಿಗಳನ್ನು ಶಾಸನಸಭೆಗೆ ಆಯ್ಕೆ ಮಾಡಬೇಕು. ದೇಶದ ಆಸ್ತಿ, ಸಂಪತ್ತು ಕೆಲವರಿಗೆ ಮಾತ್ರ ಸೀಮಿತವಾಗಿದೆ. ಹಿಂದುಳಿದವರು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News