ವಸತಿಗಾಗಿ ಬಿಡಿಎ ಕದ ತಟ್ಟಿದ ಪೊಲೀಸ್ ಇಲಾಖೆ

Update: 2018-08-24 16:43 GMT

ಬೆಂಗಳೂರು, ಆ.24: ಪೊಲೀಸರ ವಸತಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿರುವ ಇಲಾಖೆ ತನ್ನ ಸಿಬ್ಬಂದಿಗಾಗಿ ಬಿಡಿಎ ನಿರ್ಮಿಸುತ್ತಿರುವ ವಸತಿ ಸಮುಚ್ಛಯಗಳನ್ನು ಖರೀದಿ ಮಾಡುವ ಚಿಂತನೆ ನಡೆಸಿದೆ.

ಹಲವಾರು ವರ್ಷಗಳಿಂದ ಹೌಸಿಂಗ್ ಕಾರ್ಪೋರೇಷನ್ ಪೊಲೀಸ್ ಇಲಾಖೆಗೆ ಅಗತ್ಯವಿದ್ದಷ್ಟು ವಸತಿಯನ್ನು ನಿರ್ಮಾಣ ಮಾಡಿ ಕೊಡಲಾಗುತ್ತಿತ್ತು. ಆದರೆ, ನಗರ ಪ್ರಮಾಣ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವಸತಿಗಳ ಕೊರತೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಡಿಎ ಕದ ತಟ್ಟಿದೆ ಎನ್ನಲಾಗುತ್ತಿದೆ.

ನಗರ ಪ್ರದೇಶದಲ್ಲಿ ಬಿಡಿಎ ಈಗಾಗಲೇ ಹತ್ತಾರು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದ್ದು, ಅದರಲ್ಲಿಯೇ ಹಲವು ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಲು ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಬಿಡಿಎ ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ವಸತಿ ಸಮುಚ್ಛಯ ಖರೀದಿ ಮಾಡುವ ಸಂಬಂಧ ಸರಕಾರದ ಮಟ್ಟದಲ್ಲಿಯೂ ಮಾತುಕತೆ ನಡೆದಿದೆ ಎನ್ನಲಾಗಿದ್ದು, ಸದ್ಯದಲ್ಲಿಯೇ ಖರೀದಿ ಪ್ರಕ್ರಿಯೆಗೆ ಚಾಲನೆ ದೊರೆಯುವ ಸಂಭವವಿದೆ. ಇನ್ನು ಗೃಹ ಇಲಾಖೆ ಸಚಿವರಾಗಿ ಡಾ.ಜಿ.ಪರಮೇಶ್ವರ್‌ರೊಂದಿಗೆ ಚರ್ಚಿಸಿದ್ದು, ಖರೀದಿ ಪ್ರಕ್ರಿಯೆ ಮತ್ತಷ್ಟು ಸುಲಭವಾಗಲಿದೆ.

ಅಪಾರ್ಟ್‌ಮೆಂಟ್ ಖರೀದಿಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಹಿರಿಯ ಪೊಲೀಸ್ ಅಧಿಕಾರಿ ಕಿಶೋರ್‌ಚಂದ್ರ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ಜತೆ ಹಲವು ಬಾರಿ ಮಾತುಕತೆಯೂ ನಡೆದಿದೆ ಎಂದು ತಿಳಿದುಬಂದಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಅಲ್ಲಿ ಎಲ್ಲವೂ ಅಂತಿಮಗೊಳ್ಳಲಿದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.

ನಗರ ವ್ಯಾಪ್ತಿಯ ದೊಡ್ಡಬನಹಳ್ಳಿ, ವಡೇರಹಳ್ಳಿ, ಕೊಮ್ಮಘಟ್ಟ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಪಾರ್ಟ್‌ಮೆಂಟ್‌ಗಳು ನಿರ್ಮಾಣ ಮಾಡಲಾಗಿದ್ದು, ಇಲಾಖೆಯ ಅಧಿಕಾರಿಗಳು ಇಲ್ಲಿನ ಹಲವು ಸೈಟ್‌ಗಳಿಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಒಂದೇ ಬ್ಲಾಕ್‌ನಲ್ಲಿ ಅಪಾರ್ಟ್‌ಮೆಂಟ್ ನೀಡುವಂತೆ ಮನವಿ ಮಾಡಿದ್ದಾರೆ.

ಇಂದಿನ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಒಂದೇ ಕಡೆ ನೀಡಲು ಸಾಧ್ಯವಾಗುವುದಿಲ್ಲ. ಆದುದರಿಂದಾಗಿ, ಲಭ್ಯವಿರುವಷ್ಟು ಕಡೆ ಒಂದೇ ಬ್ಲಾಕ್‌ನಲ್ಲಿ ನೀಡಲು ಆಲೋಚನೆ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News