ಅಕ್ರಮ ಬಂಧನಕ್ಕೆ ಆದೇಶ ನೀಡಿದ್ದ ಐಎಎಸ್ ಅಧಿಕಾರಿಗೆ ಜೈಲು

Update: 2018-08-25 07:33 GMT

ಹೈದರಾಬಾದ್, ಆ.25: ಐಎಎಸ್ ಅಧಿಕಾರಿ ಶಿವ ಕುಮಾರ್ ನಾಯ್ಡು ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಹೈದರಾಬಾದ್ ಹೈಕೋರ್ಟ್ ದೋಷಿಯೆಂದು ಘೋಷಿಸಿ ಅವರಿಗೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಅಧಿಕಾರಿಗೆ ರೂ.2000 ದಂಡ ವಿಧಿಸಿದ ನ್ಯಾಯಾಲಯ ಐಎಎಸ್ ಅಧಿಕಾರಿಯಿಂದಾಗಿ ಅನಗತ್ಯ ಮತ್ತು ಅಕ್ರಮ ಬಂಧನಕ್ಕೊಳಗಾದ ನಿವೃತ್ತ ಸರಕಾರಿ ಉದ್ಯೋಗಿಯೊಬ್ಬರಿಗೆ ರೂ.50,000 ಪರಿಹಾರ ನೀಡುವಂತೆಯೂ ತೆಲಂಗಾಣ ಸರಕಾರಕ್ಕೆ ಆದೇಶಿಸಿದೆ.

ಮೆಹಬೂಬ್ ನಗರದ ನಿವೃತ್ತ ಸರಕಾರಿ ಉದ್ಯೋಗಿ ಎ.ಬುಚಯ್ಯ ಎಂಬವರು ಅಧಿಕಾರಿಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ದೂರುದಾರರು ತಮಗೆ ಸೇರಿದ ಜಮೀನಿನಲ್ಲಿ ಮದುವೆ ಹಾಲ್ ಒಂದನ್ನು ನಿರ್ಮಿಸುತ್ತಿದ್ದಾಗ ಕೆಲ ಜನರು ಜಂಟಿ ಆಯುಕ್ತರಾಗಿದ್ದ ಶಿವ ಕುಮಾರ್ ನಾಯ್ಡು ಅವರಿಗೆ ದೂರು ನೀಡಿ ನಿರ್ಮಿಸಲಾಗುತ್ತಿರುವ ಕಟ್ಟಡ ಅಕ್ರಮ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಅಧಿಕಾರಿ ಆ ನಿರ್ಮಾಣ ಕಾಮಗಾರಿಗೆ ಜುಲೈ 1, 2017ರಂದು ತಡೆಯಾಜ್ಞೆ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಬುಚಯ್ಯ ಹೈಕೋರ್ಟಿನ ಮೊರೆ ಹೋಗಿದ್ದರು.

ತನ್ನ ಆಗಸ್ಟ್ 29, 2018ರ ಆದೇಶದಲ್ಲಿ ಹೈಕೋರ್ಟ್ ಜಂಟಿ ಆಯುಕ್ತರ ಆದೇಶಕ್ಕೆ ತಡೆ ಹೇರಿದ್ದರಿಂದ ಸಿಟ್ಟುಗೊಂಡ ಅಧಿಕಾರಿ ತಮ್ಮ ಮ್ಯಾಜಿಸ್ಟೀರಿಯಲ್ ಅಧಿಕಾರಗಳನ್ನು ಬಳಸಿ ಬುಚಯ್ಯ ಅವರಿಗೆ ಎರಡು ತಿಂಗಳು 29 ದಿನಗಳ ಕಾಲ ಜೈಲು ಶಿಕ್ಷೆ ನೀಡುವಂತೆ ಸ್ಥಳೀಯ ಸರ್ಕಲ್ ಇಸ್ಪೆಕ್ಟರ್ ಗೆ ಆದೇಶಿಸಿದ್ದರು.

ಕೆಲ ದಿನಗಳ ಕಾಲ ಜೈಲಿನಲ್ಲಿದ್ದ ಬುಚಯ್ಯ ನಂತರ ಜಾಮೀನಿನ ಮೇಲೆ ಹೊರಬಂದು ಅಧಿಕಾರಿಯ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News