ಖಾಸಗಿ ಶಾಲಾ-ಕಾಲೇಜುಗಳ ಹೆಚ್ಚುವರಿ ಶುಲ್ಕಕ್ಕೆ ಶೀಘ್ರ ಕಡಿವಾಣ: ಸಚಿವ ಎನ್.ಮಹೇಶ್

Update: 2018-08-25 13:33 GMT

ಬೆಂಗಳೂರು, ಆ.25: ಖಾಸಗಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ನಿಯಂತ್ರಣಕ್ಕೆ ಕ್ರಮ ಜರುಗಿಸಲು ಚರ್ಚೆ ನಡೆಸಿದ್ದು, ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ತಿಳಿಸಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸರ್ವಶಿಕ್ಷಣ ಅಭಿಯಾನ ಇಲಾಖೆ ವತಿಯಿಂದ ವೃತ್ತಿ ಮಾರ್ಗದರ್ಶನ ಮತ್ತು ಕೌನ್ಸೆಲಿಂಗ್ ಸೆಲ್‌ಗಳ ಪ್ರಾರಂಭ ಮತ್ತು ಶಿಕ್ಷಣ ಕುರಿತು ಸಮಾಲೋಚನೆ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಶಿಕ್ಷಣ ಎಂಬುದು ಸೇವಾ ವಲಯಕ್ಕೆ ಸೇರಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ವ್ಯಾಪಾರ ವಲಯವಾಗಿ ಬದಲಾಗುತ್ತಿದೆ. ನಾಗರಿಕ ಸಮಾಜ ಸರಕಾರ ಇದ್ದರೂ, ಎಲ್‌ಕೆಜಿಗೆ 5 ಲಕ್ಷ ರೂ. ಡೊನೇಷನ್ ಕೇಳುತ್ತಿರುವುದು ಅಚ್ಚರಿ ಮೂಡಿಸುತ್ತದೆ. ಎಲ್ಲವನ್ನೂ ಸರಿದಾರಿಗೆ ತರುವ ಅಗತ್ಯವಿದೆ ಎಂದರು.

ಸ್ವಾತಂತ್ರ್ಯ ನಂತರ ಭಾರತ ಸಾಕ್ಷರತೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. 1901 ರಲ್ಲಿ ಶೇ.6ರಷ್ಟಿದ ಸಾಕ್ಷರತೆ ಈಗ ಶೇ.74 ಆಗಿದೆ. ಅಲ್ಲದೆ, ಶಿಕ್ಷಣ ಇಲಾಖೆ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಇಲಾಖೆಯಾಗಿದ್ದು, ದೇಶ ಕಟ್ಟಲು ವ್ಯಕ್ತಿಗಳನ್ನು ಸೃಷ್ಟಿ ಮಾಡಬೇಕು. ಬೇರೆ ಇಲಾಖೆಯಂತೆ ಈ ಇಲಾಖೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಭಾರತೀಯ ಸಮಾಜದ ಸಾಮಾಜಿಕ ಸ್ಥಿತಿಗತಿಗಳನ್ನು ಅರಿತು ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ಸಮಗ್ರ ಶಿಕ್ಷಣ ಅಭಿಯಾನಕ್ಕೆ ಪೂರಕವಾಗಿ ಆರ್ಥಿಕ ಸ್ವಾವಲಂಬಿಯಾಗಿ ಕೌಶಲ್ಯಾಧಾರಿತ ಪಠ್ಯಗಳನ್ನು ಅಳವಡಿಸುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರು ಸರಕಾರಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಅನುದಾನ ತಾರತಮ್ಯ: ಕೊಡಗಿನಲ್ಲಿ ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಜನರಿಗೆ ಎಲ್ಲ ರೀತಿಯ ನೆರವು ಒದಗಿಸುವಲ್ಲಿ ಕೇಂದ್ರ ಸರಕಾರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ಕೊಡಗಿನಲ್ಲಿ ಸುಮಾರು 3 ಸಾವಿರ ಕೋಟಿ ರೂ. ಹಾನಿಯಾಗಿದೆ. ಕೇರಳ ಮಾದರಿಯಲ್ಲೇ ಇಲ್ಲೂ ಕೇಂದ್ರ ಸರಕಾರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಾಥಮಿಕ ಶಿಕ್ಷಣ ಇಲಾಖೆ ಕೊಡಗಿನ ಸಂತ್ರಸ್ತರ ನೆರವಿಗಾಗಿ ಶಾಲಾ ಶಿಕ್ಷಕರ ಒಂದು ದಿನದ ವೇತನ 45 ಕೋಟಿ ರೂ. ದೇಣಿಗೆಯಾಗಿ ನೀಡಿದೆ. ಇದರಲ್ಲಿ 4 ಕೋಟಿ ರೂ.ಗಳನ್ನು ಶಿಕ್ಷಣ ಇಲಾಖೆ ಪಡೆದು ಹಾಳಾಗಿರುವ ಶಾಲಾ ಕಟ್ಟಡಗಳ ದುರಸ್ತಿಗೆ ಬಳಕೆ ಮಾಡಲಿದೆ ಎಂದು ಅವರು ಹೇಳಿದರು.

ಬಸ್‌ಪಾಸ್ ಬಗ್ಗೆ ಮುಖ್ಯಮಂತ್ರಿ ನಿರ್ಧಾರ

ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ಪಾಸ್ ನೀಡುವ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು.

ಸಚಿವೆಯ ನಡೆ ಸರಿಯಲ್ಲ

ಕೊಡಗಿಗೆ ಭೇಟಿ ನೀಡಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗು ಜಿಲ್ಲಾ ಉಸ್ತುವಾರಿ ಸಾ.ರಾ. ಮಹೇಶ್ ಜತೆ ನಡೆದುಕೊಂಡ ರೀತಿ ಸರಿಯಲ್ಲ.

-ಎನ್.ಮಹೇಶ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News